Go to full page →

ಹಾನಿಕರವಾದ ಓದುವಿಕೆಯ ಪ್ರಭಾವ KanCCh 195

ಮನಸ್ಸು ಯಾವುದನ್ನು ಕೇಳುವುದೋ, ನೋಡುವುದೋ ಇದರಿಂದ ಬಹಳಷ್ಟು ಮಟ್ಟಿಗೆ ಪ್ರಭಾವ ಹೊಂದುತ್ತದೆಂದು ಸೈತಾನನಿಗೆ ತಿಳಿದಿದೆ. ಆದುದರಿಂದ ಅವನು ದೊಡ್ಡವರು ಚಿಕ್ಕವರು, ಯೌವನಸ್ಥರೆನ್ನದೆ ಎಲ್ಲರೂ ಕಥೆ ಪುಸ್ತಕಗಳು, ಕಾಲ್ಪನಿಕ ಕಥೆಗಳು ಹಾಗೂ ಇತರ ಸಾಹಿತ್ಯ ಓದುವಂತೆ ಪ್ರೇರಿಸುತ್ತಾನೆ. ಅವುಗಳನ್ನು ಓದುವವರು ತಮ್ಮ ಕರ್ತವ್ಯಗಳಿಗೆ ಅನರ್ಹರಾಗುತ್ತಾರೆ. ಅವರು ಅವಾಸ್ತವಿಕ ಜೀವನದಲ್ಲಿ ಜೀವಿಸುತ್ತಾರೆ ಹಾಗೂ ಪರಲೋಕದ ಮನ್ನವನ್ನು ಒದಗಿಸುವ ಸತ್ಯವೇದವನ್ನು ಓದಲು ಬಯಸುವುದಿಲ್ಲ. ಬಲಗೊಳ್ಳಬೇಕಾದ ಮನಸ್ಸು ದುರ್ಬಲಗೊಳ್ಳುತ್ತದೆ. ಇದರಿಂದ ಅವರು ತಮ್ಮ ಮನಸ್ಸಿಗೆ ಭದ್ರಕೋಟೆಯಾದ ಮತ್ತು ಕ್ರಿಸ್ತನಂತೆ ಶೋಧನೆಗಳನ್ನು ಜಯಿಸಬೇಕಾದ ವಾಕ್ಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಹಾಗೂ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಕ್ರಿಸ್ತನ ದೈವನಿಯಮಿತ ಸೇವೆ ಹಾಗೂ ಕಾರ್ಯಗಳನ್ನು ತಿಳಿಸುವ ಮಹಾಸತ್ಯಗಳನ್ನು ಅರಿಯಲು ವಿಫಲರಾಗುತ್ತಾರೆ. KanCCh 195.3

ಜಗತ್ತಿನಲ್ಲಿ ಮತ್ತು ನಮ್ಮದೇ ಭಾಷೆಗಳಲ್ಲಿ ತಿಂಗಳು, ವರ್ಷಗಳಲ್ಲಿ ಸಾವಿರಾರು ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಇವುಗಳನ್ನು ಓದಿದಲ್ಲಿ ಮನಸ್ಸಿಗೂ ಮತ್ತು ದೇಹಕ್ಕೂ ಆಯಾಸವಾಗುವುದಲ್ಲದೆ, ಬಾಧೆ ಉಂಟಾಗುತ್ತದೆ. ಪ್ರೀತಿ, ಪ್ರೇಮ, ಪ್ರಣಯದ ಕಥೆಗಳು,ಹುಡುಗಾಟಿಕೆಯ ಮತ್ತು ರೋಮಾಂಚನ ಹುಟ್ಟಿಸುವ ಕಾಲ್ಪನಿಕ ಕಥೆಗಳು ಅಷ್ಟೇಕೆ ಕಾಲ್ಪನಿಕ ಕಾದಂಬರಿಗಳಿಗೆ ಯಾವುದೇ ಒಂದು ನೈತಿಕ ಪಾಠ ಸೇರಿಸಿರುವ ಧಾರ್ಮಿಕ ಪುಸ್ತಕಗಳೂ ಸಹ ಓದುಗರಿಗೆ ಶಾಪವಾಗಿದೆ. ಅಂತ ಕಾದಂಬರಿಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಸಂಬಂಧಪಟ್ಟ ವಿಷಯಗಳೇ ಇರಬಹುದು, ಆದರೆ ದೇವದೂತನ ವೇಷದಲ್ಲಿರುವ ಸೈತಾನನು ಅವುಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಓದುಗರನ್ನು ಆಕರ್ಷಿಸಿ ವಂಚಿಸುತ್ತಾನೆ. ಇವುಗಳನ್ನು ಓದುವವರು ಶೋಧನೆಗಳನ್ನು ಎದುರಿಸಲು ಶಕ್ತರಾಗಿರುವುದಿಲ್ಲ ಮತ್ತು ಸರಿಯಾದ ಸಿದ್ಧಾಂತಗಳಿಗೆ ಬದ್ಧರಾಗಿರುವುದಿಲ್ಲ KanCCh 195.4

ಕಾಲ್ಪನಿಕ ಕಥೆಗಳನ್ನು ಓದುವವರು ಆತ್ಮೀಯವಾಗಿ ವಿನಾಶಗೊಳಿಸುವ ಕೆಟ್ಟತನದಲ್ಲಿ ಮುಳುಗಿದ್ದು, ಅದರಿಂದಾಗಿ ಪರಿಶುದ್ಧ ಸತ್ಯವೇದದ ಸೌಂದರ್ಯವು ಕಾಂತಿಹೀನವಾಗುತ್ತದೆ. ಇದು ಅನಾರೋಗ್ಯಕರವಾದ ಪ್ರಚೋದನೆ ಉಂಟುಮಾಡಿ, ಕಲ್ಪನೆಯನ್ನು ಭ್ರಮೆಗೊಳಿಸುತ್ತದೆ. ಅಂತವುಗಳನ್ನು ಓದುವವರ ಮನಸ್ಸು ಅನುಪಯುಕ್ತವಾಗಿ ಅವರು ಪ್ರಾರ್ಥನೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅಲ್ಲದೆ ಆತ್ಮೀಕ ಕಾರ್ಯಗಳಿಗೆ ಅವರ ಮನಸ್ಸು ಅಯೋಗ್ಯವಾಗುತ್ತದೆ. KanCCh 196.1

ಕ್ರೈಸ್ತ ಯೌವನಸ್ಥರಿಗೆ ದೇವರು ಶ್ರೇಷ್ಠವಾದ ಸಾಮರ್ಥ್ಯಗಳನ್ನು ಕೊಟ್ಟಿದ್ದಾನೆ. ಆದರೆ ಅವರು ಅಶ್ಲೀಲವಾದ ಮತ್ತು ಕಾಲ್ಪನಿಕವಾದ ಕಥೆ, ಕಾದಂಬರಿಗಳನ್ನು ಓದುವುದರ ಮೂಲಕ ತಮ್ಮ ಸಾಮರ್ಥ್ಯಗಳನ್ನು ದೈಹಿಕವಾಗಿಯೂ ಹಾಗೂ ನೈತಿಕವಾಗಿಯೂ ದುರ್ಬಲಗೊಳಿಸಿದ್ದಾರೆ. ಇದರಿಂದ ಅವರು ಕ್ರೈಸ್ತ ನಂಬಿಕೆಯಲ್ಲಿಯೂ ಅಥವಾ ಕ್ರಿಸ್ತನ ಕೃಪೆಯಲ್ಲಿಯೂ ಎಷ್ಟೇ ವರ್ಷಗಳಾದರೂ ಆತ್ಮೀಕವಾಗಿ ಬೆಳವಣಿಗೆ ಹೊಂದಲಾಗದಂತೆ ಅವರ ಮನಸ್ಸು ಗಲಿಬಿಲಿಗೊಳಗಾಗಿ ನಿತ್ರಾಣಗೊಂಡಿದೆ. ಕ್ರಿಸ್ತನ ಶೀಘ್ರವಾದ ಎರಡನೇ ಬರೋಣವನ್ನು ಎದುರು ನೋಡುತ್ತಿರುವ ಹಾಗೂ ಲಯವಾಗುವ ಶರೀರವು ನಿರ್ಲಯತ್ವವನ್ನು ಧರಿಸಿಕೊಳ್ಳುವ ಅದ್ಭುತವಾದ ಬದಲಾವಣೆಗಾಗಿ ಎದುರು ನೋಡುತ್ತಿರುವವರು ಈ ಲೋಕದಲ್ಲಿ ಜೀವಿಸಿರುವ ಅವಧಿಯಲ್ಲಿ ಉನ್ನತವಾದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. KanCCh 196.2

ಯೌವನಸ್ಥರಾದ ಪ್ರಿಯ ಸ್ನೇಹಿತರೇ, ರೋಮಾಂಚನ ಉಂಟುಮಾಡುವ ಕಾಲ್ಪನಿಕ ಪುಸ್ತಕಗಳ ಪ್ರಭಾವದ ಬಗ್ಗೆ ನಿಮ್ಮದೇ ಸ್ವಂತ ಅನುಭವವನ್ನು ನೆನಪಿಸಿಕೊಳ್ಳಿರೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಇಂತ ಪುಸ್ತಕಗಳನ್ನು ಓದಿದ ಮೇಲೆ ಸತ್ಯವೇದದ ಜೀವವಾಕ್ಯಗಳನ್ನು ಆಸಕ್ತಿಯಿಂದ ಓದಲು ನಿಮಗೆ ಸಾಧ್ಯವಾಗುತ್ತದೆಯೇ? ದೇವರ ವಾಕ್ಯವು ನಿಮಗೆ ಆಸಕ್ತಿಕರವಾಗಿಲ್ಲವೆಂದು ಅನಿಸುವುದಿಲ್ಲವೇ? ರಮ್ಯವಾದ ಪ್ರಣಯಕಥೆಯು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು, ಮನಸ್ಸಿನ ಆರೋಗ್ಯದ ಸ್ಥಿತಿಗತಿಯ ಲಯವನ್ನು ನಾಶಮಾಡುತ್ತದೆ. ಇದರಿಂದ ನಿತ್ಯಜೀವಕ್ಕೆ ಸಂಬಂಧಪಟ್ಟ ಪ್ರಮುಖವಾದ ಹಾಗೂ ಗಂಭೀರವಾದ ಸತ್ಯಗಳನ್ನು ತಿಳಿಸುವ ವಚನಗಳಿಗೆ ನಿಮ್ಮ ಗಮನ ಕೇಂದ್ರೀಕರಿಸಿ ಅಸಾಧ್ಯವಾಗುತ್ತದೆ. KanCCh 196.3

ಕೆಲಸಕ್ಕೆ ಬಾರದ ಕಳಪೆ ವಿಷಯಗಳಿಂದ ಕೂಡಿದ ಎಲ್ಲಾ ಪುಸ್ತಕಗಳನ್ನು ಓದುವುದಿಲ್ಲವೆಂದು ದೃಢನಿರ್ಧಾರ ಮಾಡಿ. ಇದು ನಿಮ್ಮ ಆತ್ಮೀಕ ಜೀವಿತವನ್ನು ಬಲಗೊಳಿಸುವುದಿಲ್ಲ, ಬದಲಾಗಿ ನಿಮ್ಮ ಪ್ರತಿಭೆಯ ಸೃಜನಶೀಲತೆಯನ್ನು ನಾಶಗೊಳಿಸಿ ಮನಸ್ಸನ್ನು ಭಾವುಕತೆಯಿಂದ ತುಂಬಿಸುತ್ತದೆ. ಇದರಿಂದ ನೀವು ಕ್ರಿಸ್ತನ ಬಗ್ಗೆ ಹಾಗೂ ಆತನ ಪರಿಶುದ್ಧ ಗ್ರಂಥದ ಬಗ್ಗೆ ಆಸಕ್ತಿ ಕಳೆದುಕೊಳ್ಳುವಿರಿ. ತಪ್ಪಾದ ಮಾರ್ಗಕ್ಕೆ ನಡೆಸುವ ಎಲ್ಲವುಗಳಿಂದ ನಿಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಮನಸ್ಸಿನ ಸಾಮರ್ಥ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಲ್ಲದ, ಶಾರೀರಿಕ ದಣಿವುಂಟುಮಾಡುವ ಕೆಲಸಕ್ಕೆ ಬಾರದ ಕಥಾಪುಸ್ತಕಗಳಿಂದ ದೂರವಿರಿ. ಮನಸ್ಸಿನ ಆಲೋಚನೆಗಳು ನಾವು ಅದಕ್ಕೆ ಯಾವ ರೀತಿಯ ಬೌದ್ಧಿಕ ಹಾಗೂ ಮಾನಸಿಕ ಸಾಮಗ್ರಿ ಒದಗಿಸುತ್ತೇವೆಯೋ ಅದರಂತೆಯೇ ಇರುತ್ತವೆ. ಆತ್ಮೀಕವಾದ, ಆರೋಗ್ಯಕರ ಸಾಹಿತ್ಯ ಓದಿದಲ್ಲಿ ನಮ್ಮ ಮನಸ್ಸಿನ ಆಲೋಚನೆಗಳೂ ಸಹ ಅವುಗಳಂತೆ ಆರೋಗ್ಯಕರವಾಗಿದ್ದು, ನಿಮ್ಮ ಆತ್ಮೀಕ ಜೀವನದ ಬೆಳವಣಿಗೆಗೆ ಸಹಕಾರಿಯಾಗುತ್ತವೆ. KanCCh 197.1