ಸೈತಾನನು ಪರಲೋಕದಲ್ಲಿ ದೇವರ ವಿರುದ್ಧ ದಂಗೆಯೆದ್ದನು. ಇದರಿಂದಾಗಿ ಅವನು ಹಾಗೂ ಅವನೊಂದಿಗೆ ಮೂರನೇ ಒಂದುಭಾಗದಷ್ಟು ದೂತರು ಭೂಮಿಗೆ ದೊಬ್ಬಲ್ಪಟ್ಟರು. ಅವನು ಈ ದೂತರೊಂದಿಗೆ ಸಮಾಲೋಚನೆ ಮಾಡಿ ಮಾನವ ಜನಾಂಗವನ್ನು ವಿನಾಶಗೊಳಿಸುವ ತಂತ್ರೋಪಾಯ ಸೂಚಿಸುವಂತೆ ತಿಳಿಸಿದನು. ಸೈತಾನನ ದೂತರು ಒಂದಾದ ಮೇಲೊಂದರಂತೆ ಅನೇಕ ನಾಶಕರ ಸಲಹೆ ನೀಡಿದರು. ಕೊನೆಯಲ್ಲಿ ಆ ವೈರಿಯು ಸ್ವತಃ ತಾನೇ ಒಂದು ಯೋಜನೆ ಹಾಕಿದನು. ದೇವರ ಆಹಾರಕ್ಕಾಗಿ ಕೊಟ್ಟಂತ ದ್ರಾಕ್ಷೆಹಣ್ಣು, ಗೋಧಿ ಹಾಗೂ ಇತರ ಪದಾರ್ಥಗಳನ್ನು ತೆಗೆದುಕೊಂಡು ಅವುಗಳನ್ನು ಮದ್ಯಪಾನವೆಂಬ ವಿಷವಾಗಿ ಪರಿವರ್ತಿಸುವುದು, ಇದರಿಂದ ಮನುಷ್ಯನ ಶಾರೀರಿಕ, ಮಾನಸಿಕ ಮತ್ತು ನೈತಿಕಸಾಮರ್ಥ್ಯವು ನಾಶವಾಗಿ ಅವನ ಇಂದ್ರಿಯಗಳ ಗ್ರಹಣಶಕ್ತಿ ನಾಶವಾಗುವುದು. ಅನಂತರ ತಾನು ಅವರಮೇಲೆ ಸಂಪೂರ್ಣ ಹತೋಟಿ ಹೊಂದಬೇಕೆನ್ನುವುದು ಸೈತಾನನು ಮಾನವ ಜನಾಂಗವನ್ನು ನಾಶಮಾಡಲು ತನ್ನ ಕೆಟ್ಟ ದೂತರ ಮುಂದೆ ಪ್ರತಿಪಾದಿಸಿದ ವಿನಾಶಕಾರಿ ಯೋಜನೆಯಾಗಿತ್ತು. ಮದ್ಯಪಾನದ ಪರಿಣಾಮದಿಂದ ಮನುಷ್ಯರು ಎಲ್ಲಾ ವಿಧವಾದ ಅಪರಾಧಗಳನ್ನೂ ಮಾಡುವರು. ವಿಕೃತವಾದ ಲೈಂಗಿಕ ಕಾಮನೆಗಳು ಮತ್ತು ಆಹಾರ ಪದಾರ್ಥಗಳ ಸೇವನೆ ಪೂರೈಸಿಕೊಳ್ಳುವ ಅಪೇಕ್ಷೆಯಿಂದ ಜಗತ್ತು ಭ್ರಷ್ಟವಾಗುವುದು. ಮನುಷ್ಯರು ಮದ್ಯಪಾನ ಮಾಡುವಂತೆ ಪ್ರೇರಿಸುವ ಮೂಲಕ, ಅವರ ಮಾನಸಿಕ, ಶಾರೀರಿಕ ಮತ್ತು ಆತ್ಮೀಕ ಸಾಮರ್ಥ್ಯವುಕೆಳಮಟ್ಟಕ್ಕೆ ಕುಸಿಯುವಂತೆ ಮಾಡುವುದು ಸೈತಾನನ ಉದ್ದೇಶವಾಗಿದೆ. KanCCh 99.1
ಮದ್ಯಪಾನ, ಬೀಡಿ, ಸಿಗರೇಟು, ಚಹಾ ಮತ್ತು ಕಾಫಿ - ಈ ಮಾದಕ ಪದಾರ್ಥಗಳ ಮೂಲಕ ಸೈತಾನನು ಜಗತ್ತನ್ನು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ದೇವರು ಕೊಟ್ಟಿರುವ ಮನಸ್ಸು ಶುದ್ಧವಾಗಿರುವುದಕ್ಕೆ ಬದಲಾಗಿ, ಅಫೀಮು, ಚರಸ್ ಮೊದಲಾದ ಮಾದಕ ಪದಾರ್ಥಗಳ ಸೇವನೆಯಿಂದ ಭ್ರಷ್ಟವಾಗುತ್ತಿದೆ. ಯಾವುದು ಸರಿ ಯಾವುದು ತಪ್ಪು ಎಂಬುದರ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಯುವಲ್ಲಿ ಮೆದುಳು ವಿಫಲವಾಗುತ್ತದೆ. ವೈರಿಯಾದ ಸೈತಾನನು ಮಾದಕ ವ್ಯಸನಿಗಳ ಮೇಲೆ ಸಂಪೂರ್ಣ ಹತೋಟಿ ಹೊಂದುತ್ತಾನೆ. ಮನುಷ್ಯನು ತನ್ನ ವಿಮೋಚನಾಶಕ್ತಿಯನ್ನು ಕಳೆದುಕೊಂಡು ಹುಚ್ಚನಂತಾಗುತ್ತಾನೆ. ಯಾವುದು ಸರಿ ಎಂಬುದರ ಬಗ್ಗೆ ಅವನಿಗೆ ಜ್ಞಾನವಿರುವುದಿಲ್ಲ. KanCCh 99.2
ನಮ್ಮ ಸೃಷ್ಟಿಕರ್ತನಾದ ದೇವರು ನಮಗೆ ಆಶೀರ್ವಾದಗಳನ್ನು ಧಾರಾಳವಾಗಿ ನೀಡಿದ್ದಾನೆ. ದೈವಾನುಗ್ರಹವಾದ ಈ ಎಲ್ಲಾ ವರಗಳನ್ನು ನಾವು ವಿವೇಕದಿಂದಲೂ ಮತ್ತು ಮಿತಸಂಯಮದಿಂದಲೂ ಉಪಯೋಗಿಸಿದಲ್ಲಿ, ರೋಗರುಜಿನಗಳು, ಬಡತನ, ದುಃಖಗಳು ಈ ಜಗತ್ತಿನಿಂದ ಎಷ್ಟೋ ಮಟ್ಟಿಗೆ ಕಡಿಮೆಯಾಗುವವು. ಆದರೆ ಮನುಷ್ಯನು ತನ್ನ ದುಷ್ಟತನದಿಂದ ದೇವರ ಆಶೀರ್ವಾದಗಳನ್ನು ಶಾಪವನ್ನಾಗಿ ಮಾಡಿಕೊಂಡಿರುವುದು ದುರದೃಷ್ಟಕರ. KanCCh 99.3
ಭೂಮಿಯ ಉತ್ಪನ್ನಗಳಾದ ದೇವರ ಅಮೂಲ್ಯ ವರಗಳಾಗಿರುವ ಆಹಾರದ ದವಸಧಾನ್ಯಗಳನ್ನು ಅಮಲು ಬರಿಸುವ ಮದ್ಯವನ್ನಾಗಿ ತಯಾರಿಸಲು ದುರುಪಯೋಗ ಮಾಡಿಕೊಳ್ಳುವ ವಿಕೃತ ಕಾರ್ಯಕ್ಕಿಂತ ಮಿಗಿಲಾದ ದೋಷವು ಯಾವುದೂ ಇಲ್ಲ. ಪೌಷ್ಟಿಕಾಂಶವುಳ್ಳ ಧಾನ್ಯಗಳು, ಆರೋಗ್ಯಕರವೂ, ರುಚಿಕರವೂ ಆದ ಹಣ್ಣುಗಳನ್ನು ಇಂದ್ರಿಯಗಳನ್ನು ನಾಶಗೊಳಿಸಿ, ಮೆದುಳನ್ನು ಮಂಕುಗೊಳಿಸಿ ಹುಚ್ಚರನ್ನಾಗಿ ಮಾಡುವಂತ ಮದ್ಯಪಾನವನ್ನಾಗಿ ಮಾಡಲಾಗುತ್ತಿದೆ. ಈ ವಿಷಕಾರಕ ಮದ್ಯಪಾನಸೇವನೆಯ ಮೂಲಕ ಲಕ್ಷಾಂತರಕುಟುಂಬಗಳು ಅನ್ನ, ಬಟ್ಟೆ, ವಸತಿ ಮುಂತಾದ ಜೀವನದ ಅಗತ್ಯಗಳಿಂದಲೂ ವಂಚಿತವಾಗಿವೆ, ಅಪರಾಧ ಹಿಂಸಾಚಾರಗಳು ಮಿತಿ ಮೀರಿವೆ ಹಾಗೂ ಮದ್ಯಪಾನಿಗಳು ರೋಗ ರುಜಿನಗಳಿಗೆ ತುತ್ತಾಗಿ ಅಕಾಲವಾಗಿ ಸಾಯುತ್ತಿದ್ದಾರೆ. KanCCh 100.1