Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-3 — ಕ್ರಿಸ್ತನ ಎರಡನೇ ಬರೋಣಕ್ಕಾಗಿ ಸಿದ್ಧತೆ

    ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಒಬ್ಬ ದೇವದೂತನು “ಮುಂದೆ ಲೋಕದಲ್ಲಿ ಸಂಭವಿಸುವ ಘಟನೆಗಳನ್ನು ಎದುರಿಸುವುದಕ್ಕಾಗಿ ಸಿದ್ಧತೆ ಮಾಡಿಕೋ, ಸಿದ್ಧತೆ ಮಾಡಿಕೋ” ಎಂದು ಹೇಳಿದನು. ನಾವು ಕ್ರಿಸ್ತನ ಬರೋಣವು ಮುಂದೆ ಹೋಗುವಂತೆ ಮಾಡಬಾರದು. ನಮ್ಮ ಕ್ರಿಯೆಗಳು ನಮ್ಮ ನಂಬಿಕೆಯೊಡನೆ ಹೊಂದಿಕೆಯಾಗಿರಬೇಕು. ನಮ್ಮ ಹೃದಯವು ದೇವರಲ್ಲಿ ಭದ್ರವಾಗಿ ನೆಲೆಗೊಂಡಿರಬೇಕು ಮತ್ತು ನಮ್ಮ ಪ್ರಭಾವವು ದೇವರು ಹಾಗೂ ಆತನ ಸತ್ಯವನ್ನು ತಿಳಿಸಬೇಕು. ನಾವು ನಿರ್ಲಕ್ಷ್ಯದಿಂದಲೂ ಮತ್ತು ಉದಾಸೀನದಿಂದಲೂ ಇದ್ದಲ್ಲಿ ಕರ್ತನನ್ನು ಗೌರವಿಸಿ ಘನಪಡಿಸಲಾಗದು. ನಾವು ನಿರಾಶೆಗೊಂಡಾಗ ಇಲ್ಲವೆ ಹತಾಶೆಗೊಂಡಾಗ ದೇವರನ್ನು ಮಹಿಮೆ ಪಡಿಸಲಾರೆವು. ನಮ್ಮನ್ನು ಮಾತ್ರವಲ್ಲದೆ, ಇತರರನ್ನೂ ಸಹ ಆತ್ಮೀಕವಾಗಿ ರಕ್ಷಿಸಲು ಮನಃಪೂರ್ವಕವಾಗಿ ಪ್ರಾಮಾಣಿಕತೆ ತೋರಿಸಬೇಕು. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಮತ್ತು ಬೇರೆ ಎಲ್ಲದಕ್ಕೂ ಅನಂತರ ಗಮನ ನೀಡಬೇಕು. ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ಪರಲೋಕದ ವೈಭವ, ಮಹಿಮೆ ಹಾಗೂ ಸೌಂದರ್ಯವನ್ನೂ ಮತ್ತು ದೇವದೂತರು ಆನಂದಪರವಶರಾಗಿ ತಮ್ಮ ಮಧುರ ಗಾಯನದಿಂದ ಯೇಸುವಿಗೆ ಘನಮಾನ, ಗೌರವ ಸಲ್ಲಿಸುವುದನ್ನು ತೋರಿಸಲಾಯಿತು. ಮತ್ತು ದೇವಕುಮಾರನ ಅದ್ಭುತವಾದ ಪ್ರೀತಿಯ ಬಗ್ಗೆ ಸ್ವಲ್ಪ ಮನವರಿಕೆಯಾಯಿತು. ಮಾನವರಾದ ನಮ್ಮ ರಕ್ಷಣೆಗಾಗಿ ಯೇಸುಕ್ರಿಸ್ತನು ಎಷ್ಟೊಂದು ಆಸಕ್ತನಾಗಿದ್ದನೆಂದರೆ, ಆತನು ಪರಲೋಕದ ತನ್ನೆಲ್ಲಾ ಮಹಿಮೆ, ವೈಭವ ಹಾಗೂ ಗೌರವವನ್ನು ಬಿಟ್ಟು ಈ ಲೋಕಕ್ಕೆ ಬಂದನು. ಅಲ್ಲದೆ ಮನುಷ್ಯರಿಂದ ಅಪಮಾನ, ನಿಂದೆ, ಅಪಹಾಸ್ಯ, ಹಿಂಸೆಯಮರಣ- ಇವೆಲ್ಲವನ್ನೂ ತಾಳ್ಮೆಯಿಂದಲೂ ಹಾಗೂ ದೀನತೆಯಿಂದಲೂ ಸಹಿಸಿಕೊಂಡನು. ಆತನು ನಮ್ಮ ಪಾಪಗಳ ದೆಸೆಯಿಂದ ಗಾಯಗೊಂಡು ಜಜ್ಜಲ್ಪಟ್ಟನು. ನಮ್ಮನ್ನು ಮರಣದಿಂದ ತಪ್ಪಿಸಿ, ತನ್ನ ರಕ್ತದಿಂದ ಶುದ್ಧೀಕರಿಸಿ, ಆತನು ಪರಲೋಕದಲ್ಲಿ ನಮಗಾಗಿ ಸಿದ್ಧಪಡಿಸುತ್ತಿರುವ ಭವನಗಳಲ್ಲಿ ಆತನೊಂದಿಗೆ ನಾವು ಸದಾಕಾಲ ವಾಸಿಸಬೇಕೆಂಬುದು ಆತನ ಚಿತ್ತವಾಗಿದೆ. ಅಲ್ಲದೆ ಪರಲೋಕದ ವೈಭವವನ್ನು ಕಣ್ಣಾರೆ ಕಂಡು ಅವರು ಹಾಡುವುದನ್ನು ಕೇಳುವುದು ಮತ್ತು ಅವರೊಡನೆ ನಾವು ಹಾಡಬೇಕೆಂಬುದು ದೇವರ ಬಯಕೆಯಾಗಿದೆ. ಈ ಕಾರಣದಿಂದಲೇ ಆತನು ಶಿಲುಬೆಯಲ್ಲಿ ಅತ್ಯಂತ ವೇದನೆಯಿಂದ ಮರಣ ಹೊಂದಿದನು. KanCCh 14.1

    ಸಮಸ್ತ ಪರಲೋಕವೇ ಮಾನವರಾದ ನಮ್ಮ ರಕ್ಷಣೆಯ ಬಗ್ಗೆ ಅತ್ಯಂತ ಆಸಕ್ತಿ ಹೊಂದಿರುವಾಗ, ನಾವು ಉದಾಸೀನರಾಗಿರಬೇಕೇ? ಈ ವಿಷಯವು ಅಷ್ಟೇನೂ ಪ್ರಾಮುಖ್ಯವಲ್ಲದ್ದು ಎಂದು ನಾವು ನಿರ್ಲಕ್ಷ್ಯದಿಂದಿರಬೇಕೇ? ನಮಗಾಗಿ ಕ್ರಿಸ್ತನು ಮಾಡಿದ ಆ ಮಹಾತ್ಯಾಗವನ್ನು ನಾವು ಕಡೆಗಣಿಸಬೇಕೇ? ಕೆಲವರು ಇವೆಲ್ಲವುಗಳನ್ನು ಬಹಳ ಕಡೆಗಣಿಸಿದ್ದಾರೆ. ಅವರು ದೇವರ ಕರುಣೆಯನ್ನು ಬಹಳ ಅಲ್ಪವಾಗಿ ಕಾಣುವುದರಿಂದ, ಆತನ ಕೋಪವು ಅವರ ಮೇಲಿರುತ್ತದೆ. ದೇವರ ಪವಿತ್ರಾತ್ಮನನ್ನು ಯಾವಾಗಲೂ ದುಃಖಪಡಿಸಲಾಗದು. ದೇವರಾತ್ಮನನ್ನು ಹೆಚ್ಚಾಗಿ ದುಃಖಪಡಿಸಿದರೆ, ಆತನು ನಮ್ಮನ್ನು ಬಿಟ್ಟುಹೋಗುತ್ತಾನೆ. ಮನುಷ್ಯರನ್ನು ರಕ್ಷಿಸಲು ದೇವರು ಎಲ್ಲವನ್ನೂ ಮಾಡಿದ್ದಾಗ್ಯೂ, ಅವರು ಕ್ರಿಸ್ತನ ಕರುಣೆಯನ್ನು ತಿರಸ್ಕರಿಸಿದಲ್ಲಿ, ಅವರಿಗೆ ಮರಣ ನಿಶ್ಚಯ. ಅವರಿಗೆ ಬರುವ ಮರಣವು ಭಯಾನಕವಾದದ್ದು. ಕ್ರಿಸ್ತನು ಶಿಲುಬೆಯ ಮೇಲೆ ಅತ್ಯಂತ ವೇದನೆಯನ್ನು ಅನುಭವಿಸಿ ಮಾನವರಿಗೆ ಪಾಪದಿಂದ ಅಮೂಲ್ಯವಾದ ಬಿಡುಗಡೆ ನೀಡಿದನು. ಇಂತಹ ವಿಮೋಚನೆಯನ್ನು ತಿರಸ್ಕರಿಸಿದವರು, ಕ್ರಿಸ್ತನು ಅನುಭವಿಸಿದಂತ ವೇದನೆಯನ್ನು ಅನುಭವಿಸಬೇಕು. ಆಗ ಅವರಿಗೆ ತಾವು ಕಳೆದುಕೊಂಡದ್ದು ನಿತ್ಯಜೀವ ಹಾಗೂ ಪರಲೋಕರಾಜ್ಯವೆಂದು ಮನವರಿಕೆಯಾಗುವುದು. ಅಮೂಲ್ಯ ಜೀವವು ಒಂದು ಸಾರಿ ಕಳೆದುಹೋದರೆ, ಅದು ಎಂದೆಂದಿಗೂ ಕಳೆದುಹೋದಂತೆಯೇ. KanCCh 14.2

    ದೇವದರ್ಶನದಲ್ಲಿ ಶ್ರೀಮತಿ ವೈಟಮ್ಮನವರು ಒಬ್ಬ ದೇವದೂತನು ತನ್ನ ಕೈಯಲ್ಲಿ ತಕ್ಕಡಿ ಹಿಡಿದುಕೊಂಡು ದೇವರ ಮಕ್ಕಳ ಅದರಲ್ಲಿಯೂ ವಿಶೇಷವಾಗಿ ಯೌವನಸ್ಥರ ಆಲೋಚನೆಗಳು ಹಾಗೂ ಆಸಕ್ತಿಯನ್ನು ತೂಕ ಮಾಡುವುದನ್ನು ನೋಡಿದರು.KanCCh 15.1

    ತಕ್ಕಡಿಯ ಒಂದು ಭಾಗದಲ್ಲಿ ಪರಲೋಕದ ಬಗ್ಗೆ ಇರುವ ಆಲೋಚನೆಗಳು ಮತ್ತು ಆಸಕ್ತಿ ಹಾಗೂ ಮತ್ತೊಂದು ಭಾಗದಲ್ಲಿ ಲೋಕದ ಬಗೆಗಿನ ಆಸಕ್ತಿ ಹಾಗೂ ಆಲೋಚನೆಗಳಿದ್ದವು. ತಕ್ಕಡಿಯ ಈ ಭಾಗದಲ್ಲಿ ಅವರು ಓದಿದ ಕಥಾಪುಸ್ತಕಗಳು, ವೇಷಭೂಷಣ, ಅಲಂಕಾರದ ಪ್ರದರ್ಶನ, ಅಹಂಕಾರ ಮುಂತಾದವುಗಳಿದ್ದವು. ಅಯ್ಯೋ! ಅದು ಎಂತಹ ಗಂಭೀರವಾದ ಕ್ಷಣ! ದೇವದೂತರು ತಕ್ಕಡಿಗಳನ್ನು ಹಿಡಿದುಕೊಂಡು ದೇವರ ಜನರೆಂದು ಹೇಳಿಕೊಳ್ಳುವವರ ಆಲೋಚನೆಗಳನ್ನು ಲೆಕ್ಕ ಹಾಕುತ್ತಿದ್ದರು. ತಕ್ಕಡಿಯ ಈ ಭಾಗವು ಲೌಕಿಕವಾದ ವಿಷಯಗಳು, ಅಹಂಕಾರ ಮುಂತಾದ ವಿಷಯಗಳಿಂದ ತುಂಬಿದ್ದು ಶೀಘ್ರವಾಗಿ ಕೆಳಕ್ಕೆ ಹೋಯಿತು. ಈ ಭಾಗವು ಕೆಳಕ್ಕೆ ಹೋದಂತೆ, ತಕ್ಕಡಿಯ ಮತ್ತೊಂದು ಭಾಗವು ತಕ್ಷಣವೇ ಮೇಲಕ್ಕೆ ಹೋಯಿತು. ಅಯ್ಯೋ! ಅದು ಎಷ್ಟೊಂದು ಹಗುರವಾಗಿದೆ! ಶ್ರೀಮತಿ ವೈಟಮ್ಮನವರು ಈ ದೃಶ್ಯವನ್ನು ಬರವಣಿಗೆ ಮೂಲಕ ನಮಗೆ ತಿಳಿಸಿದರು. ಆದರೆ ದೇವದೂತನು ದೇವಜನರ ಆಲೋಚನೆಗಳು ಹಾಗೂ ಆಸಕ್ತಿಗಳನ್ನು ತೂಕ ಮಾಡಿದಾಗ, ಅದು ಅವರ ಮೇಲೆ ಎಂತಹ ಗಂಭೀರವಾದ ಪರಿಣಾಮ ಉಂಟಾಯಿತೆಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಆ ದೇವದೂತನು ಶ್ರೀಮತಿ ವೈಟಮ್ಮನವರಿಗೆ “ಇಂತಹ ವ್ಯಕ್ತಿಗಳು ಎಂದೆಂದಿಗೂ ಪರಲೋಕಕ್ಕೆ ಹೋಗಲು ಸಾಧ್ಯವೇ ಇಲ್ಲ. ಅವರಲ್ಲಿರುವ ನಿರೀಕ್ಷೆಯು ವ್ಯರ್ಥ. ಅವರು ತಕ್ಷಣವೇ ಪಶ್ಚಾತ್ತಾಪಪಟ್ಟು ರಕ್ಷಣೆ ಹೊಂದಿದ್ದರೆ, ನಾಶವಾಗುತ್ತಾರೆಂದು ದೇವಜನರಿಗೆ ತಿಳಿಸು” ಎಂದು ಹೇಳಿದನು.KanCCh 15.2

    ದೈವಭಕ್ತರಂತೆ ನಟಿಸುವುದು ಯಾರಿಗೂ ರಕ್ಷಣೆ ಕೊಡುವುದಿಲ್ಲ. ಎಲ್ಲರೂ ಸಹ ದೈವಭಕ್ತಿಯ ಮನಃಪೂರ್ವಕವಾದ ಹಾಗೂ ಸಜೀವ ಅನುಭವ ಹೊಂದಿರಬೇಕು. ಸಂಕಟದ ಸಮಯದಲ್ಲಿ ಇದು ಮಾತ್ರ ಅವರನ್ನು ರಕ್ಷಿಸುವುದು. ಆಗ ಅವರ ಕಾರ್ಯಗಳು ಏನೆಂದು ಪುಟಕ್ಕೆ ಹಾಕಲ್ಪಡುವವು. ಅವರ ಕೃತ್ಯಗಳು ಬಂಗಾರ, ಬೆಳ್ಳಿ ಹಾಗೂ ಅಮೂಲ್ಯವಾದ ಲೋಹಗಳೆಂದು ತಿಳಿದುಬಂದಲ್ಲಿ, ಅವರು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತರಾಗಿರುವರು. ಆದರೆ ಅವರ ಕಾರ್ಯಗಳು ಮರ ಅಥವಾ ಹುಲ್ಲು, ಕೂಳೆಯೆಂದು ಕಂಡುಬಂದಲ್ಲಿ, ಯೆಹೋವ ದೇವರ ಉಗ್ರಕೋಪದಿಂದ ಯಾವುದೂ ಸಹ ಅವರನ್ನು ರಕ್ಷಿಸಲಾಗದು.KanCCh 16.1

    ಅನೇಕರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು, ತಾವೇ ಅವರಿಗಿಂತ ಶ್ರೇಷ್ಠರೆಂದು ಎಣಿಸಿಕೊಳ್ಳುತ್ತಾರೆ. ಈ ರೀತಿ ಎಂದಿಗೂ ಮಾಡಬಾರದು. ಕ್ರಿಸ್ತನುಮಾತ್ರ ನಮಗೆ ಮಾದರಿಯೇಹೊರತು, ಬೇರೆ ಯಾರೂಅಲ್ಲ. ಆತನು ಮಾತ್ರ ನಮ್ಮ ಶ್ರೇಷ್ಠವಾದ ನಿಜ ಮಾದರಿಯಾಗಿದ್ದಾನೆ ಮತ್ತೂ ನಾವು ಆತನನ್ನು ಅನುಕರಿಸಲು ಪ್ರಯತ್ನಿಸಬೇಕು. ನಾವು ಕ್ರಿಸ್ತನೊಂದಿಗೆ ಜೊತೆ ಕೆಲಸಗಾರರಾಗಿದ್ದೇವೆ. ಇಲ್ಲದಿದ್ದಲ್ಲಿ ವೈರಿಯಾದ ಸೈತಾನನ ಜೊತೆ ಕೆಲಸಗಾರರಾಗಿದ್ದೇವೆ. ನಾವು ಕ್ರಿಸ್ತನೊಂದಿಗೆ ಸೇರುತ್ತೇವೆ ಅಥವಾ ಚದರಿಸಲ್ಪಡುತ್ತೇವೆ. ನಾವು ಪರಿಪೂರ್ಣರಾದ ಕ್ರೈಸ್ತರಾಗಲು ನಿರ್ಧರಿಸಬೇಕು ಅಥವಾ ಕ್ರೈಸ್ತರಾಗಿರಬಾರದು. “...... ನೀನು ತಣ್ಣಗಾಗಲಿ, ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು. ನೀನು ಬೆಚ್ಚಗೂಇಲ್ಲದೆ ತಣ್ಣಗೂಇಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು” ಎಂದು ಕ್ರಿಸ್ತನು ಹೇಳುತ್ತಾನೆ (ಪ್ರಕಟನೆ 3:15,16).KanCCh 16.2

    ಕೆಲವರು ತಮ್ಮನ್ನು ತಾವೇ ನಿರಾಕರಿಸುವುದು ಅಥವಾ ತ್ಯಾಗ ಮಾಡುವುದು ಏನೆಂಬುದಾಗಲಿ ಅಥವಾ ಕ್ರಿಸ್ತನ ಸತ್ಯಕ್ಕೋಸ್ಕರ ಶ್ರಮೆ, ಸಂಕಟ ಅನುಭವಿಸುವುದು ಏನೆಂದು ತಿಳಿದಿಲ್ಲ. ಆದರೆ ತ್ಯಾಗ ಮಾಡದೆ ಯಾರೂ ಸಹ ಪರಲೋಕವನ್ನು ಸೇರಲಾರರು. ನಮ್ಮನ್ನುನಾವೇ ನಿರಾಕರಿಸುವ ತ್ಯಾಗಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಕೆಲವರು ತಮ್ಮನ್ನು ಹಾಗೂ ತಮ್ಮ ಶರೀರವನ್ನು ದೇವರ ಯಜ್ಞವೇದಿಯ ಮೇಲೆ ಸಮರ್ಪಿಸಿಕೊಂಡಿಲ್ಲ. ಅವರು ದೇವರ ಉದ್ದೇಶವನ್ನು ಮರೆತು ತಮ್ಮ ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುವುದರಲ್ಲಿಯೂ, ಮುಂದಾಲೋಚನೆಯಿಲ್ಲದೆ ಅವಿವೇಕಿಗಳಾಗಿದ್ದಾರೆ. ನಿತ್ಯಜೀವಕ್ಕಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧರಾಗಿರುವವರು, ಅದನ್ನು ಪಡೆದುಕೊಳ್ಳುವರು. ನಿತ್ಯಜೀವಕ್ಕಾಗಿ ಕಷ್ಟಸಂಕಟ ಪಡುವುದು, ತಮ್ಮನ್ನುತಾವೇ ನಿರಾಕರಿಸಿ ಎಲ್ಲಾ ವಿಧವಾದ ಲೌಕಿಕ ಆಶಾಪಾಶಗಳನ್ನು ತ್ಯಾಗ ಮಾಡುವುದು ಖಂಡಿತವಾಗಿಯೂ ಯೋಗ್ಯವಾಗಿದೆ. ಪರಲೋಕದ ಅತ್ಯಂತ ಮಹಿಮೆಯುಳ್ಳ ವೈಭವದ ಮುಂದೆ, ಈ ಲೋಕದ ಎಲ್ಲಾ ಸುಖಸಂತೋಷವು ಏನೇನೂ ಅಲ್ಲ.KanCCh 16.3

    *****