Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-17 — ಪತಿ ಅಥವಾ ಪತ್ನಿಯನ್ನು ಆರಿಸಿಕೊಳ್ಳುವುದು

    ಮದುವೆ ನಿಮ್ಮ ಜೀವನವನ್ನು ಈ ಲೋಕದಲ್ಲಿ ಮಾತ್ರವಲ್ಲದೆ, ಮುಂದೆ ಬರಲಿರುವ ನೂತನ ಲೋಕದಲ್ಲಿಯೂ ಪ್ರಭಾವ ಬೀರುವ ಒಂದು ಸಂಸ್ಕಾರವಾಗಿದೆ. ಪ್ರಾಮಾಣಿಕನಾದ ಒಬ್ಬ ಕ್ರೈಸ್ತನು ಮದುವೆ ವಿಷಯದಲ್ಲಿ ದೇವರು ತನ್ನ ಮಾರ್ಗವನ್ನು ಒಪ್ಪಿಕೊಂಡಿದ್ದಾನೆಂಬ ಅರಿವಿಲ್ಲದೆ, ತನ್ನ ಯೋಜನೆಯಲ್ಲಿ ಮುಂದುವರಿಯುವುದಿಲ್ಲ. ಅವನು ತನ್ನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವುದಿಲ್ಲ. ಬದಲಾಗಿ ದೇವರು ಆರಿಸಿಕೊಡಬೇಕೆಂದು ಭಾವಿಸುತ್ತಾನೆ. ನಮ್ಮನ್ನು ನಾವೇ ಸಂತೋಷ ಪಡಿಸಿಕೊಳ್ಳಬಾರದು. ತಾನು ಪ್ರೀತಿಸದವರನ್ನು ಒಬ್ಬನು ಮದುವೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯವನ್ನು ಶ್ರೀಮತಿ ವೈಟಮ್ಮನವರು ಹೊಂದಿದ್ದಾರೆಂದು ಇದರಿಂದ ತಿಳಿದುಕೊಳ್ಳಬಾರದು. ಇದು ಪಾಪವಾಗಿದೆ. ಆದರೆ ಕಾಲ್ಪನಿಕವಾದ ಮತ್ತು ಭಾವೋದ್ವೇಗದ ಸ್ವಭಾವವು ನಾಶವಾಗಲಿಕ್ಕೆ ಕಾರಣವಾಗಬಾರದು. ದೇವರು ನಮ್ಮ ಸಂಪೂರ್ಣ ಹೃದಯ ಮತ್ತು ಶ್ರೇಷ್ಠವಾದ ವಾತ್ಸಲ್ಯ ಮನೋಭಾವವನ್ನು ಬಯಸುತ್ತಾನೆ.KanCCh 116.1

    ವಿವಾಹವಾಗಬೇಕೆಂದು ಆಲೋಚಿಸುತ್ತಿರುವವರು ಹಾಗೂ ನಿರೀಕ್ಷಿಸುತ್ತಿರುವವರು ತಾವು ಸ್ಥಾಪಿಸಲಿರುವ ಹೊಸ ಕ್ರೈಸ್ತ ಕುಟುಂಬದ ಗುಣಸ್ವಭಾವ ಮತ್ತು ವರ್ಚಸ್ಸು ಹೇಗಿರಬೇಕೆಂದು ನಿರ್ಧರಿಸಬೇಕು. ತಂದೆ-ತಾಯಿಯರ ಪವಿತ್ರವಾದ ವಿಶ್ವಾಸಕ್ಕೆ ಅವರು ಬದ್ಧರಾಗುತ್ತಾರೆ. ಈ ಲೋಕದಲ್ಲಿ ಅವರ ಮಕ್ಕಳ ಯೋಗಕ್ಷೇಮ ಮತ್ತು ಬರಲಿರುವ ಪರಲೋಕದಲ್ಲಿ ಈ ಮಕ್ಕಳ ಸಂತೋಷವು ತಂದೆ-ತಾಯಿಯರ ಮೇಲೆ ಆತುಕೊಂಡಿರುತ್ತದೆ. ತಮ್ಮ ಚಿಕ್ಕಮಕ್ಕಳು ಹೊಂದಿರುವ ಶಾರೀರಿಕ ಮತ್ತು ನೈತಿಕ ಗುಣ ನಡತೆಯನ್ನು ಅವರು ಹೆಚ್ಚು ಕಡಿಮೆ ಸಂಪೂರ್ಣವಾಗಿ ನಿರ್ಧರಿಸುತ್ತಾರೆ. ಕುಟುಂಬದ ಸ್ವಭಾವದ ಮೇಲೆ ಸಮಾಜ, ಸಮುದಾಯದ ಪರಿಸ್ಥಿತಿಯು ಅವಲಂಬಿತವಾಗಿದೆ. ಪ್ರತಿ ಕುಟುಂಬವು ಹೊಂದಿರುವ ವರ್ಚಸ್ಸು ಸಮುದಾಯದ ಅಥವಾ ಸಮಾಜದ ಉನ್ನತಿ ಅಥವಾ ಅವನತಿಯನ್ನೂ ತೋರಿಸುತ್ತದೆ.KanCCh 116.2

    ಕ್ರೈಸ್ತ ಯುವಕ ಯುವತಿಯರು ಸ್ನೇಹ ಬೆಳೆಸುವಾಗ ಮತ್ತು ಸಂಗಾತಿಯನ್ನು ಆರಿಸಿಕೊಳ್ಳುವಾಗ ಬಹಳ ಎಚ್ಚರಿಕೆ ವಹಿಸಬೇಕು. ಈಗ ನಿಮ್ಮ ಸಂಗಾತಿಯಾಗುವವರನ್ನು ಅಪ್ಪಟ ಬಂಗಾರವೆಂದು ನೀವು ತಿಳಿದಿರಬಹುದು. ಆದರೆ ಆಕೆ/ ಅವನು ಬಂಗಾರವಲ್ಲ. ಬದಲಾಗಿ ಕೆಳಮಟ್ಟದ ಒಂದು ಲೋಹವೆಂದು ತಿಳಿದುಬರುವುದಕ್ಕೆ ಮೊದಲೇ ಎಚ್ಚರಿಕೆವಹಿಸಿ. ಲೋಕದೊಂದಿಗೆ ಹೊಂದಿಕೊಂಡಿರುವುದರಿಂದ ನಿಮ್ಮ ದೇವರ ಸೇವೆಗೆ ಅಡ್ಡಿಯಾಗಬಹುದು. ವ್ಯಾಪಾರ ವ್ಯವಹಾರದಲ್ಲಾಗಲಿ ಇಲ್ಲವೆ ವೈವಾಹಿಕ ಸಂಬಂಧದಲ್ಲಿ ಇಜ್ಜೋಡಾದಾಗ, ದಾಂಪತ್ಯದಲ್ಲಿ ಬಿರುಕು ಬಿಟ್ಟು ಅನೇಕರು ಹಾಳಾಗುತ್ತಾರೆ.KanCCh 116.3

    ನಿಮ್ಮನ್ನು ಜೀವನ ಸಂಗಾತಿಯನ್ನಾಗಿ ಆರಿಸಿಕೊಳ್ಳುವವರ ಪ್ರತಿಯೊಂದು ಗುಣ ಸ್ವಭಾವ ಮತ್ತು ಭಾವನೆಗಳನ್ನು ಎಚ್ಚರಿಕೆಯಿಂದ ಗಮನಿಸಿ. ವಿವಾಹಕ್ಕೆ ಕಾಲಿಡಲು ನೀವು ತೆಗೆದುಕೊಳ್ಳಲಿರುವ ನಿಮ್ಮ ನಿರ್ಧಾರವು ನಿಮ್ಮ ಜೀವನದ ಪ್ರಮುಖ ಹೆಜ್ಜೆಯಾಗಿದ್ದು, ತರಾತುರಿಯಿಂದ ಯಾವುದನ್ನೂ ನಿರ್ಣಯಿಸಬಾರದು. ನೀವು ಸಂಗಾತಿಯಾಗುವವರನ್ನು ಪ್ರೀತಿಸಬಹುದು, ಆದರೆ ಮುಂದಾಲೋಚನೆ ಇಲ್ಲದೆ ಕುರುಡುತನದಿಂದ ಪ್ರೀತಿಸಬಾರದು. ನೀವು ಆರಿಸಿಕೊಳ್ಳಲಿರುವ ಸಂಗಾತಿಯೊಂದಿಗಿನ ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುವುದೋ ಇಲ್ಲವೋ, ಹೊಂದಾಣಿಕೆಯಿಲ್ಲದೆ ದುಃಖಕ್ಕೆ ಕಾರಣವಾಗುವುದೋ ಎಂಬುದನ್ನು ಗಮನವಿಟ್ಟು ಪರೀಕ್ಷಿಸಿ. ಈ ಮದುವೆಯು ಪರಲೋಕಕ್ಕೆ ಹೋಗಲು ಸಹಾಯವಾಗುವುದೇ? ಇದರಿಂದ ದೇವರಲ್ಲಿ ನನ್ನ ಪ್ರೀತಿ ಹೆಚ್ಚಾಗುವುದೇ? ಈ ಜೀವನದಲ್ಲಿ ನಾನು ಇತರರಿಗೆ ಇನ್ನೂ ಹೆಚ್ಚಾಗಿ ಉಪಯುಕ್ತನಾಗುವೆನೇ? ಎಂಬೀ ಪ್ರಶ್ನೆಗಳು ಮದುವೆಗೆ ಮೊದಲೇ ನಿಮ್ಮ ಮನಸ್ಸಿನಲ್ಲಿ ಬರಬೇಕು. ಇವೆಲ್ಲವುಗಳ ಸಾಧ್ಯತೆ ಇದೆ ಎಂಬ ಉತ್ತರ ದೊರಕಿದಲ್ಲಿ, ದೇವರ ಭಯದಿಂದ ಮುಂದುವರಿಯಬೇಕು.KanCCh 117.1

    ಸಂಗಾತಿಯನ್ನು ಅಂದರೆ ಪತಿ/ ಪತ್ನಿಯನ್ನು ಆರಿಸಿಕೊಳ್ಳುವುದು ನಿಮ್ಮ ತಂದೆ ತಾಯಿಗಳು ಹಾಗೂ ನಿಮ್ಮ ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಆತ್ಮೀಕ ಯೋಗಕ್ಷೇಮದ ಬೆಳವಣಿಗೆಗೆ ಪೂರಕವಾಗಿರಬೇಕು. ಈ ರೀತಿಯಾದಲ್ಲಿ ಅವರು ತಮ್ಮ ನೆರೆಯವರಿಗೆ ಆಶೀರ್ವಾದ ತರುವುದಲ್ಲದೇ, ತಮ್ಮ ಸೃಷ್ಟಿಕರ್ತನನ್ನು ಗೌರವಿಸಲು ಸಾಧ್ಯವಾಗುತ್ತದೆ.KanCCh 117.2