Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-1 — ನಂಬಿಗಸ್ತರಿಗೆ ಬರುವ ಪ್ರತಿಫಲ

    ಶ್ರೀಮತಿ ವೈಟಮ್ಮನವರಿಗೆ ಬಂದ ಮೊದಲನೆ ದೇವದರ್ಶನ

    ಕುಟುಂಬದೊಡನೆ ಪ್ರಾರ್ಥಿಸುತ್ತಿರುವಾಗ ಶ್ರೀಮತಿ ವೈಟಮ್ಮನವರಿಗೆ ಪರಿಶುದ್ಧಾತ್ಮನ ದರ್ಶನವಾಗಿ, ಅವರು ಕತ್ತಲೆಯ ಈ ಲೋಕದಿಂದ ಮೇಲಮೇಲಕ್ಕೆ ಎತ್ತಲ್ಪಟ್ಟಂತೆ ಅನುಭವವಾಯಿತು. ಅಡ್ವೆಂಟಿಸ್ಟರು ಎಲ್ಲಿದ್ದಾರೆಂದು ನೋಡಬೇಕೆಂದು ಶ್ರೀಮತಿ ವೈಟಮ್ಮನವರು ನೋಡಿದಾಗ, ಅವರು ಕಾಣಲಿಲ್ಲ. ಆಗ ಪರಲೋಕದಿಂದ ಒಂದು ವಾಣಿಯು “ಮತ್ತೊಮ್ಮೆ ಇನ್ನೂಸ್ವಲ್ಪ ಮೇಲೆ ನೋಡು” ಎಂದು ಹೇಳಿತು. ಅವರು ಕಣ್ಣೆತ್ತಿ ಮೇಲೆ ನೋಡಿದಾಗ, ಲೋಕದಿಂದ ಅಡ್ವೆಂಟಿಸ್ಟರು ಪ್ರಯಾಣ ಮಾಡಬೇಕಾದ ದಾರಿಯ ಆರಂಭದಲ್ಲಿ ಅವರ ಹಿಂದೆ ಪ್ರಕಾಶಮಾನವಾದ ಒಂದು ಬೆಳಕಿತ್ತು. ಅದು `ಮಧ್ಯರಾತ್ರಿಯ ಗಟ್ಟಿಯಾದ ಕೂಗು’ ಎಂದು ಒಬ್ಬ ದೇವದೂತನು ಶ್ರೀಮತಿ ವೈಟಮ್ಮನವರಿಗೆ ಹೇಳಿದನು. ಅಡ್ವೆಂಟಿಸ್ಟರು ತಮ್ಮ ಪ್ರಯಾಣದಲ್ಲಿ ಎಡವದಂತೆ ಈ ಪ್ರಕಾಶಮಾನವಾದ ಬೆಳಕು ದಾರಿಯುದ್ದಕ್ಕೂ ಹೊಳೆಯುತ್ತಿತ್ತು. ಹೊಸ ಯೆರೂಸಲೇಮ್ ಪಟ್ಟಣಕ್ಕೆ ನಡೆಸುತ್ತಿದ್ದ ಯೇಸುಕ್ರಿಸ್ತನ ಮೇಲೆ ಅವರು ತಮ್ಮ ದೃಷ್ಟಿಯನ್ನು ನೆಟ್ಟಿದ್ದಲ್ಲಿ, ಅವರು ಸುರಕ್ಷಿತವಾಗಿರುತ್ತಿದ್ದರು.KanCCh 1.1

    ಆದರೆ ಅಡ್ವೆಂಟಿಸ್ಟರಲ್ಲಿ ಕೆಲವರು ಶೀಘ್ರವಾಗಿ ತಮ್ಮ ಪ್ರಯಾಣದ ಆಯಾಸದಿಂದ ಬೇಸರಗೊಂಡು ತಾವು ಸೇರಬೇಕೆಂದು ನಿರೀಕ್ಷಿಸುತ್ತಿರುವ ಹೊಸ ಯೆರೂಸಲೇಮ್ ಪಟ್ಟಣವು ಇನ್ನೂ ಬಹಳ ದೂರದಲ್ಲಿದೆ ಎಂದು ಹೇಳಿದರು. ಆಗ ಯೇಸುಕ್ರಿಸ್ತನು ಮಹಿಮೆಯಿಂದ ಕೂಡಿದ ತನ್ನ ಬಲಗೈಯನ್ನು ಮೇಲೆತ್ತಿ ಅಡ್ವೆಂಟಿಸ್ಟರು ಆಯಾಸದಿಂದ ಬೇಸರಗೊಳ್ಳಬಾರದೆಂದು ಅವರನ್ನು ಉತ್ತೇಜಿಸಿ ಮೇಲೆ ಬರುವಂತೆ ಹೇಳಿದನು. ಆತನ ಬಲಗೈಯಿಂದ ಬೆಳಕು ಪ್ರಕಾಶಿಸುತ್ತಾ ಅಡ್ವೆಂಟಿಸ್ಟರ ಸಮೂಹದ ಮೇಲೆ ಅಲೆ ಅಲೆಯಾಗಿ ಕಂಡುಬಂದಿತು. ಆಗ ಅವರು ಹಲ್ಲೆಲೂಯಾ! ಎಂದು ಮಹಾಶಬ್ದದಿಂದ ಘೋಷಿಸಿದರು. ಅಡ್ವೆಂಟಿಸ್ಟರಲ್ಲಿ ಬೇರೆ ಕೆಲವರು ತಮ್ಮ ಹಿಂದೆ ಹೊಳೆಯುತ್ತಿದ್ದ ಬೆಳಕನ್ನು ಅವಿವೇಕತನದಿಂದ ಮುಂದಾಲೋಚನೆ ಇಲ್ಲದೆ ನಿರಾಕರಿಸಿ, ಇದುವರೆಗೂ ತಮ್ಮನ್ನು ನಡೆಸಿದವನು ದೇವರಲ್ಲವೆಂದು ಹೇಳಿದರು. ಆಗ ಅವರ ಹಿಂದೆ ಕಂಡುಬರುತ್ತಿದ್ದ ಬೆಳಕು ನಂದಿಹೋಗಿ ಕಗ್ಗತ್ತಲೆ ಉಂಟಾಯಿತು. ಇದರಿಂದಾಗಿ ಅವರು ಎಡವಿಬಿದ್ದು ಮುಂದೆ ಹೋಗುತ್ತಿದ್ದ ಕ್ರಿಸ್ತನು ಹಾಗೂ ಪರಲೋಕದ ದೃಷ್ಟಿಯು ಅವರಿಗೆ ಕಾಣದಂತಾಯಿತು. ಈ ಅಡ್ವೆಂಟಿಸ್ಟರು ಕ್ರಿಸ್ತ ಮಾರ್ಗದಿಂದ ಕತ್ತಲೆಯಿಂದ ಕೂಡಿದ ದುಷ್ಟಲೋಕಕ್ಕೆ ಬಿದ್ದರು. ಶೀಘ್ರದಲ್ಲಿಯೇ ಶ್ರೀಮತಿ ವೈಟಮ್ಮನವರಿಗೆ ಜಲಪ್ರವಾಹದ ಘೋಷದಂತಿದ್ದ ಶಬ್ದದಿಂದ ದೇವರು ಎರಡನೇಸಾರಿ ಕ್ರಿಸ್ತನು ಬರುವ ಗಳಿಗೆ ಹಾಗೂ ದಿನವನ್ನು ತಿಳಿಸಿದನು. ಈ ಲೋಕದಲ್ಲಿ ಜೀವಿಸುತ್ತಿದ್ದ ಒಂದುಲಕ್ಷ ನಾಲ್ವತ್ತುನಾಲ್ಕುಸಾವಿರ ದೇವಭಕ್ತರು ದೇವರಶಬ್ದವನ್ನು ತಿಳಿದು ಅರ್ಥಮಾಡಿಕೊಂಡರು. ಆದರೆ ದುಷ್ಟರು ಅದು ಗುಡುಗು ಮತ್ತು ಭೂಕಂಪವೆಂದು ತಿಳಿದುಕೊಂಡರು. ಕ್ರಿಸ್ತನು ಬರುವ ಸಮಯವನ್ನು ದೇವರು ತಿಳಿಸಿದಾಗ, ಶ್ರೀಮತಿ ವೈಟಮ್ಮನವರ ಮುಖವು, ಮೋಶೆಯು ಸೀನಾಯಿಬೆಟ್ಟದಿಂದ ಹತ್ತುಆಜ್ಞೆಗಳನ್ನು ಬರೆದ ಎರಡುಕಲ್ಲುಗಳನ್ನು ಹಿಡಿದು ಬಂದಾಗ ಅವನ ಮುಖವು ಹೇಗೆ ಹೊಳೆಯುತ್ತಿತ್ತೋ, ಅದರಂತೆಯೇ ದೇವರ ಮಹಿಮೆಯಿಂದ ತುಂಬ ಪ್ರಕಾಶಿಸುತ್ತಿತು. KanCCh 1.2

    144,000 ಜನರೆಲ್ಲರೂ ಮುದ್ರೆ ಹಾಕಲ್ಪಟ್ಟು ಪರಿಪೂರ್ಣ ಐಕ್ಯತೆಯಿಂದಿದ್ದರು. ಅವರ ಹಣೆಯ ಮೇಲೆ ತಂದೆಯಾದ ದೇವರ ಹೆಸರು, ಹೊಸ ಯೆರೂಸಲೇಮ್ ಹಾಗೂ ಯೇಸುವಿನ ಹೊಸ ಹೆಸರು ಬರೆಯಲ್ಪಟ್ಟಿತ್ತು. ಕ್ರಿಸ್ತನ ಹೆಸರು ವೈಭವದಿಂದ ಕೂಡಿದ್ದ ನಕ್ಷತ್ರದಲ್ಲಿ ಬರೆಯಲ್ಪಟ್ಟಿತ್ತು. ದೇವಭಕ್ತರಿಗೆ ಉಂಟಾದ ಪರಿಶುದ್ಧವಾದ ಈ ವೈಭವ ಹಾಗೂ ಆನಂದವನ್ನು ನೋಡಿದ ದುಷ್ಟರು ಅತಿಯಾಗಿ ರೋಷಗೊಂಡರು. ದೇವಭಕ್ತರನ್ನು ಸೆರೆಮನೆಗೆ ತಳ್ಳಬೇಕೆಂದು ಅವರೆಡೆಗೆ ದುಷ್ಟರು ಬಂದಾಗ, ಭಕ್ತರು ಕರ್ತನ ಹೆಸರನ್ನು ಉಚ್ಚರಿಸಿದರು. ತಕ್ಷಣವೇ ದುಷ್ಟಜನರು ಅಸಹಾಯಕರಾಗಿ ನೆಲದಲ್ಲಿ ಬಿದ್ದರು. ಆಗ ಸೈತಾನನ ಹಿಂಬಾಲಕರಾದ ಈ ದುಷ್ಟರಿಗೆ ದೇವರು ಅವರನ್ನು ಪ್ರೀತಿಸಿದ್ದಾನೆಂದು ತಿಳಿದುಬಂತು.KanCCh 2.1

    ಶೀಘ್ರದಲ್ಲಿಯೇ ದೇವಜನರ ಗಮನವು ಮೂಡಣ (ಪೂರ್ವ) ದಿಕ್ಕಿನ ಕಡೆಗೆ ತಿರುಗಿತು. ಅಲ್ಲಿ ಅವರಿಗೆ ಆಕಾಶದಲ್ಲಿ ಮನುಷ್ಯರ ಅಂಗೈನ ಅರ್ಧದಷ್ಟಿರುವ ಕಪ್ಪಾದ ಚಿಕ್ಕ ಮೋಡವು ಕಾಣಿಸಿತು. ಆಗ ದೇವಭಕ್ತರು ಅದು ಮನುಷ್ಯಕುಮಾರನ ಗುರುತೆಂದು ತಿಳಿದುಕೊಂಡರು. ಅವರೆಲ್ಲರೂ ಅದನ್ನೇ ದೃಷ್ಟಿಸಿ ನೋಡುತ್ತಿದ್ದರು. ಚಿಕ್ಕದಾದ ಆ ಮೋಡವು ಹತ್ತಿರ ಬರುತ್ತಿದ್ದಂತೆ ಹೆಚ್ಚು ಪ್ರಕಾಶಮಾನವಾಗಿ ವೈಭವಯುಕ್ತವಾಗಿ ಅತ್ಯಧಿಕವಾಗಿ ಹೊಳೆಯುತ್ತಾ ಒಂದು ಮಹಾ ಬಿಳಿಯ ಬಣ್ಣದ ಮೋಡವಾಯಿತು. ಆ ಮೇಘದ ಕೆಳಭಾಗವು ಬೆಂಕಿಯಂತಿತ್ತು ಹಾಗೂ ಅದರ ಮೇಲೆ ಮುಗಿಲಬಿಲ್ಲು ಹರಡಿಕೊಂಡಿತ್ತು. ಅದರ ಮೇಲೆ ಮನುಷ್ಯಕುಮಾರನಾದ ಕ್ರಿಸ್ತನು ಕುಳಿತಿದ್ದನು ಹಾಗೂ ಮೇಘದ ಸುತ್ತಲೂ ಲಕ್ಷೋಪಲಕ್ಷ ದೇವದೂತರು ಅತ್ಯಂತ ಮಧುರವಾದ ಹಾಡನ್ನು ಹಾಡುತ್ತಿದ್ದರು. ಆತನ ತಲೆಯ ಕೂದಲು ಹಿಮದಂತೆ ಬೀಳುಪಾಗಿಯೂ, ಗುಂಗುರು ಗುಂಗುರಾಗಿಯೂ ಇದ್ದು, ಆತನ ಭುಜದವರೆಗೂ ಇಳಿಬಿದ್ದಿತು. ಕ್ರಿಸ್ತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಪಾದಗಳು ಬೆಂಕಿಯೋಪಾದಿಯಲ್ಲಿ ಹೊಳೆಯುತ್ತಿದ್ದವು. ಬಲಗೈಯಲ್ಲಿ ಹರಿತವಾದ ಒಂದು ಕುಡುಗೋಲು ಹಾಗೂ ಎಡಗೈಯಲ್ಲಿ ಬಂಗಾರದ ಒಂದು ತುತ್ತೂರಿಯಿತ್ತು. ಕ್ರಿಸ್ತನ ಕಣ್ಣುಗಳು ಧಗಧಗಿಸುವ ಕೆಂಡದಂತಿದ್ದವು.KanCCh 2.2

    ಆಗ ದುಷ್ಟರ ಮುಖಗಳು ಬಿಳಿಚಿಕೊಂಡವು. ಆದರೆ ದೇವರ ಜನರು ಹರ್ಷದಿಂದ “ಮನುಷ್ಯಕುಮಾರನ ಮುಂದೆ ಯಾರು ನಿಲ್ಲಬಲ್ಲರು? ನನ್ನ ನಿಲುವಂಗಿಯು ಶುಭ್ರವಾಗಿದೆಯೇ?” ಎಂದು ಕೂಗಿದರು. ಆಗ ದೇವದೂತರು ತಮ್ಮ ಹಾಡನ್ನು ನಿಲ್ಲಿಸಿದಾಗ, ಕೆಲವು ಸಮಯ ಗಂಭೀರವಾದ ಭಯಹುಟ್ಟಿಸುವ ಮೌನ ಉಂಟಾಯಿತು. ಆಗ ಯೇಸುಕ್ರಿಸ್ತನು “ಪರಿಶುದ್ಧವಾದ ಕೈಗಳೂ ಹಾಗೂ ಹೃದಯವೂ ಉಳ್ಳವರು ನನ್ನ ಮುಂದೆ ನಿಲ್ಲಲು ಶಕ್ತರಾಗಿದ್ದಾರೆ; ನನ್ನ ಕೃಪೆಯೇ ನಿಮಗೆ ಸಾಕು” ಎಂದು ಹೇಳಿದನು. ಅದನ್ನು ಕೇಳಿದಾಗ, ದೇವಭಕ್ತರ ಮುಖವು ಪ್ರಕಾಶಿಸಿ, ಅವರ ಹೃದಯವು ಹರ್ಷದಿಂದ ತುಂಬಿತು. ಕ್ರಿಸ್ತನು ಕುಳಿತಿದ್ದ ಮೇಘವು ಭೂಮಿಗೆ ಹತ್ತಿರವಾಗುತ್ತಿದ್ದಂತೆ, ದೇವದೂತರು ಮತ್ತೊಮ್ಮೆ ಅತ್ಯಂತ ಮಧುರವಾದ ಹಾಡನ್ನು ಹಾಡಿದರು.KanCCh 2.3

    ಆಗ ಕ್ರಿಸ್ತನ ಎಡಗೈಯಲ್ಲಿದ್ದ ಬೆಳ್ಳಿ ತುತ್ತೂರಿಯಿಂದ ಶಬ್ದವುಂಟಾಯಿತು. ಆತನು ಬೆಂಕಿಯ ಜ್ವಾಲೆಯಿಂದ ಆವರಿಸಲ್ಪಟ್ಟವನಾಗಿ ಮೇಘದಿಂದ ಇಳಿದು ಬಂದನು. ಆತನು ನಿದ್ರಿಸುತ್ತಿರುವ ಭಕ್ತರ ಸಮಾಧಿಗಳನ್ನು ದೃಷ್ಟಿಸಿ ನೋಡಿ, “ದೂಳಿನಲ್ಲಿ ನಿದ್ರಿಸುತ್ತಿರುವವರೇ, ಎದ್ದೇಳಿ! ಎದ್ದೇಳಿ! ಎದ್ದೇಳಿ! ಎಂದು ಮಹಾಶಬ್ದದಿಂದ ಕೂಗಿದನು. ಆಗ ಮಹಾಭೂಕಂಪವಾಯಿತು. ಸಮಾಧಿಗಳು ತೆರೆಯಲ್ಪಟ್ಟವು ಹಾಗೂ ಕ್ರಿಸ್ತನಲ್ಲಿ ನಿದ್ರೆಹೋಗಿದ್ದ ಭಕ್ತರು ಅಮರತ್ವದೊಂದಿಗೆ ಎದ್ದು ಬಂದರು. 144,000 ಜನರು ಮರಣದಿಂದ ಅಗಲಿಸಲ್ಪಟ್ಟಿದ್ದ ತಮ್ಮ ಸ್ನೇಹಿತರನ್ನು ಗುರುತಿಸಿ ಹಲ್ಲೆಲೂಯಾ! ಎಂದು ಜಯಘೋಷ ಮಾಡಿದರು. ಜೀವಿಸುತ್ತಿದ್ದ ನೀತಿವಂತರು ಕಣ್ಣುರೆಪ್ಪೆ ಮುಚ್ಚುವಷ್ಟರಲ್ಲಿ ಮಾರ್ಪಟ್ಟು, ಪುನರುತ್ಥಾನಗೊಂಡವರೊಂದಿಗೆ ಅಂತರಿಕ್ಷದಲ್ಲಿ ಕ್ರಿಸ್ತನನ್ನು ಎದುರುಗೊಳ್ಳುವುದಕ್ಕೆ ಫಕ್ಕನೆಮೇಲಕ್ಕೆ ಎತ್ತಲ್ಪಡುವರು.KanCCh 3.1

    ಕ್ರಿಸ್ತನನ್ನು ಎದುರುಗೊಂಡವರೆಲ್ಲರೂ ಏಳುದಿನಗಳ ನಂತರ ಗಾಜಿನ ಸಮುದ್ರದಂತಿದ್ದ ಹೊಸ ಯೆರೂಸಲೇಮನ್ನು ಸೇರಿದರು. ಅಲ್ಲಿ ಯೇಸುಕ್ರಿಸ್ತನು ಸ್ವತಃ ತನ್ನ ಬಲಗೈಯಿಂದಲೇ ಅವರೆಲ್ಲರ ತಲೆಗೆ ಕಿರೀಟ ಹಾಕಿದನು. ಅಲ್ಲದೆ ಬಂಗಾರದ ಕಿನ್ನರಿ ಹಾಗೂ ವಿಜಯದ ಸಂಕೇತವಾಗಿ ಖರ್ಜೂರದ ಗರಿಗಳನ್ನು ಕೊಟ್ಟನು. ಗಾಜಿನ ಸಮುದ್ರದಂತಿದ್ದ ಪಟ್ಟಣದಲ್ಲಿ 144,000 ಮಂದಿ ಚೌಕಾಕಾರವಾಗಿ ನಿಂತಿದ್ದರು. ಅವರಲ್ಲಿ ಕೆಲವರ ಕಿರೀಟಗಳು ಬಹಳ ಪ್ರಕಾಶವಾಗಿ ಹೊಳೆಯುತ್ತಿದ್ದವು, ಬೇರೆ ಕೆಲವರ ಕಿರೀಟಗಳು ಅಷ್ಟೊಂದು ಹೊಳೆಯುತ್ತಿರಲಿಲ್ಲ. ಕೆಲವರ ಕಿರೀಟಗಳಲ್ಲಿ ಬಹಳಷ್ಟು ನಕ್ಷತ್ರಗಳಿದ್ದವು, ಇತರ ಕೆಲವರ ಕಿರೀಟಗಳಲ್ಲಿ ಕಡಿಮೆ ನಕ್ಷತ್ರಗಳಿದ್ದವು. ಆದರೆ ಅವರೆಲ್ಲರೂ ತಮಗೆ ದೊರಕಿದ ಕಿರೀಟಗಳಿಂದ ಸಂಪುರ್ಣವಾಗಿ ಸಂತೃಪ್ತರಾಗಿದ್ದರು. ಅವರೆಲ್ಲರೂ ಮಹಿಮೆಯಿಂದ ಕೂಡಿದ್ದ ಬಿಳೀನಿಲುವಂಗಿಗಳನ್ನು ಧರಿಸಿದ್ದರು. ರಕ್ಷಿಸಲ್ಪಟ್ಟ ಭಕ್ತರೆಲ್ಲರೂ ಗಾಜಿನ ಸಮುದ್ರದಿಂದ ಹೊಸ ಯೆರೂಸಲೇಮ್ ಪಟ್ಟಣದ ಬಾಗಿಲಿಗೆ ಹೋದರು. ದೇವದೂತರು ಅವರ ಸುತ್ತಲೂ ಇದ್ದರು. ಆಗ ಯೇಸುಸ್ವಾಮಿಯು ತನ್ನ ಮಹಿಮೆಯಿಂದ ಕೂಡಿದ ಬಲಿಷ್ಠ ಕೈಗಳಿಂದ ಮುತ್ತಿನ ಬಾಗಿಲನ್ನು ತೆರೆದು “ನೀವೆಲ್ಲರೂ ನನ್ನ ರಕ್ತದಿಂದ ನಿಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿರುವಿರಿ. ನನ್ನ ಸತ್ಯದಲ್ಲಿ ನೆಲೆಗೊಂಡಿರುವ ನೀವು ಈ ಪಟ್ಟಣದೊಳಗೆ ಪ್ರವೇಶಿಸಿ” ಎಂದು ನೀತಿವಂತರಿಗೆ ಹೇಳಿದನು. ಆಗ ರಕ್ಷಿಸಲ್ಪಟ್ಟ ನೀತಿವಂತರೆಲ್ಲರೂ ಪರಿಶುದ್ಧ ಪಟ್ಟಣದೊಳಗೆ ಪ್ರವೇಶಿಸಿದರು.KanCCh 3.2

    ಪರಿಶುದ್ಧ ಪಟ್ಟಣದಲ್ಲಿ ಜೀವವೃಕ್ಷವೂ ಹಾಗೂ ದೇವರ ಸಿಂಹಾಸನವೂ ಇತ್ತು. ದೇವರ ಸಿಂಹಾಸನದಿಂದ ಸ್ಫಟಿಕದಂತೆ ಪ್ರಕಾಶಮಾನವಾಗಿರುವ ಜೀವಜಲದ ನದಿ ಹರಿಯುತ್ತಿತ್ತು. ಅದರ ಎರಡೂದಡದಲ್ಲಿ ಜೀವವೃಕ್ಷವಿತ್ತು. ನದಿಯ ಒಂದು ಭಾಗದಲ್ಲಿ ಮರದ ಒಂದು ಕಾಂಡವೂ ಹಾಗೂ ಮತ್ತೊಂದು ಭಾಗದಲ್ಲಿ ಇನ್ನೊಂದು ಕಾಂಡವೂ ಇದ್ದವು. ಇವೆರಡೂ ಚೊಕ್ಕಬಂಗಾರವಾಗಿದ್ದು ಪಾರದರ್ಶಕವಾಗಿತ್ತು. ಅದು ಎರಡುಮರಗಳೆಂದು ಮೊದಲು ಶ್ರೀಮತಿ ವೈಟಮ್ಮನವರು ಅಂದುಕೊಂಡರು. ಆದರೆ ಅವರು ತಿರುಗೊಮ್ಮೆ ಗಮನವಿಟ್ಟು ನೋಡಿದಾಗ, ಮೇಲೆ ಒಂದೇಮರವಾಗಿ ಸೇರಿಕೊಂಡಿತ್ತು. ಈ ಕಾರಣದಿಂದ ಅದು ಜೀವಜಲದ ನದಿಯ ಎರಡೂ ಪಾರ್ಶ್ವಗಳಲ್ಲಿರುವ ಒಂದೇ ಜೀವವೃಕ್ಷವಾಗಿದೆ. ಅದರ ಕೊಂಬೆಗಳು ಶ್ರೀಮತಿ ವೈಟಮ್ಮನವರಿಗಿದ್ದ ಕಡೆಗೆ ಬಾಗಿಕೊಂಡಿತ್ತು. ಜೀವವೃಕ್ಷದ ಹಣ್ಣು ಬೆಳ್ಳಿಯೊಂದಿಗೆ ಬಂಗಾರವು ಸೇರಿದಂತ ಬಣ್ಣವಾಗಿದ್ದು, ಅತ್ಯಂತ ಮನೋಹರವಾಗಿತ್ತು.KanCCh 4.1

    ಶ್ರೀಮತಿ ವೈಟಮ್ಮನವರು ಜೀವವೃಕ್ಷದ ಕೆಳಗೆ ಕುಳಿತು, ಪರಲೋಕದ ಆ ವೈಭವವನ್ನು ಸವಿಯುತ್ತಿದ್ದರು. ಆಗ ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಮರಣ ಹೊಂದಿದ್ದ ಫಿಚ್ ಹಾಗೂ ಸ್ಟಾಕ್‍ಮನ್ ಎಂಬ ಇಬ್ಬರು ಸೇವಕರು ಅವರ ಬಳಿ ಬಂದು ತಾವಿಬ್ಬರೂ ನಿದ್ರಿಸುತ್ತಿದ್ದಾಗ, ನೀವು ಏನು ನೋಡಿದಿರೆಂದು ಶ್ರೀಮತಿ ವೈಟಮ್ಮನವರನ್ನು ಕೇಳಿದರು (ಇದು ಪ್ರವಾದಿನಿಯವರು ದರ್ಶನದಲ್ಲಿ ಪರಲೋಕದಲ್ಲಿದ್ದಾಗ ಕಂಡು ಬಂದ ದೃಶ್ಯ). ಈ ಲೋಕದಲ್ಲಿದ್ದಾಗ ತಾವು ಎದುರಿಸಿದ ಕಷ್ಟ ಸಂಕಟಗಳನು ನೆನಪಿಸಿಕೊಳ್ಳಲು ಶ್ರೀಮತಿ ವೈಟಮ್ಮನವರು ಪ್ರಯತ್ನಿಸಿದರು. ಆದರೆ ಪರಲೋಕದ ಆ ಮಹಿಮೆ, ವೈಭವಗಳನ್ನು ನೋಡಿದಾಗ ತಾವು ಅನುಭವಿಸಿದ ಕಷ್ಟಸಂಕಟವು ಏನೂ ಅಲ್ಲವೆಂದು ಅವರಿಗೆ ಅನಿಸಿತು. ಫಿಚ್ ಹಾಗೂ ಸ್ಟಾಕ್‍ಮನ್‍ರವರಿಗೆ ಶ್ರೀಮತಿ ವೈಟಮ್ಮನವರು ಏನೂ ಉತ್ತರಿಸಲಿಲ್ಲ. ಬದಲಾಗಿ ಹಲ್ಲೆಲೂಯಾ! ಎಂದು ಹೇಳಿ ತಮ್ಮ ಬಂಗಾರದ ಕಿನ್ನರಿಯನ್ನು ಬಾರಿಸುತ್ತಾ ದೇವರನ್ನು ಸ್ತುತಿಸಿದರು.KanCCh 4.2

    ರಕ್ಷಿಸಲ್ಪಟ್ಟ ಭಕ್ತರೆಲ್ಲರೂ ಕ್ರಿಸ್ತನೊಂದಿಗೆ ಸೇರಿ ಆ ಪರಿಶುದ್ಧ ಪಟ್ಟಣವು ಭೂಮಿಗೆ ಇಳಿದು ಬಂದು (ಇದು ಕ್ರಿಸ್ತನ ಮೂರನೇ ಬರೋಣ ಜೆಕರ್ಯ 14:4 ಪ್ರಕಟನೆ 21:10,11). ಎಣ್ಣೇಮರಗಳ ಗುಡ್ಡದ ಮೇಲೆ ನಿಂತಿತು. ಆ ಗುಡ್ಡವು ಯೇಸುಕ್ರಿಸ್ತನ ಭಾರವನ್ನು ತಾಳಲಾರದೆ ಮೂಡಲಿಂದ ಪಡುವಣ ದಿಕ್ಕಿನವರೆಗೆ ಸೀಳಿಹೋಗಿ ನಡುವೆ ಒಂದು ದೊಡ್ಡ ಬಯಲು ಪ್ರದೇಶವಾಯಿತು. ಪರಿಶುದ್ಧವಾದ ಹೊಸ ಯೆರೂಸಲೇಮ್ ಮಹಾಪಟ್ಟಣಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಹನ್ನೆರಡು ಹೆಬ್ಬಾಗಿಲುಗಳಿದ್ದು ನಾಲ್ಕು ದಿಕ್ಕುಗಳಲ್ಲಿಯೂ ಮೂರು ಮೂರು ಬಾಗಿಲುಗಳಿದ್ದವು (ಪ್ರಕಟನೆ 21:12-13) ಪ್ರತಿಯೊಂದು ಬಾಗಿಲಿನಲ್ಲಿಯೂ ಒಬ್ಬೊಬ್ಬ ದೇವದೂತನಿದ್ದನು. ಆಗ ಭಕ್ತರೆಲ್ಲರೂ ಹೊಸ ಯೆರೂಸಲೇಮ್ ಮಹಾನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿದೆ ಎಂದು ಜಯಘೋಷ ಮಾಡಿದರು. ಆ ನಗರವು ಎಣ್ಣೇಮರಗಳ ಗುಡ್ಡವು ಸೀಳಿಹೋಗಿ ದೊಡ್ಡ ಡೊಂಗರವಾಗಿದ್ದ ಸ್ಥಳದಲ್ಲಿ ಬಂದು ನಿಂತಿತು. ಪಟ್ಟಣದ ಹೊರಗೆ ವೈಭವಯುತವಾದ ದೃಶ್ಯವನ್ನು ರಕ್ಷಿಸಲ್ಪಟ್ಟ ಭಕ್ತರು ನೋಡಿದರು. ಅಲ್ಲಿ ಶ್ರೀಮತಿ ವೈಟಮ್ಮನವರು ಅತ್ಯಂತ ವೈಭವವುಳ್ಳ ಮನೆಗಳನ್ನು ನೋಡಿದರು. ಅವು ಬೆಳ್ಳಿಯಂತೆ ಹೊಳೆಯುತ್ತಿದ್ದವು ಹಾಗೂ ಮುತ್ತಿನಿಂದ ಮಾಡಿದ ನಾಲ್ಕುಕಂಬಗಳು ಅವುಗಳಿಗೆ ಆಧಾರವಾಗಿದ್ದವು. ಅದು ಅತ್ಯಂತ ಮನೋಹರವಾದ ದೃಶ್ಯವಾಗಿತ್ತು. ಆ ಮನೆಗಳಲ್ಲಿ ಭಕ್ತರು ವಾಸಿಸುವರು. ಪ್ರತಿಯೊಂದು ಮನೆಯಲ್ಲಿಯೂ ಒಂದು ಬಂಗಾರದ ಕಪಾಟಿತ್ತು (ಅಲಮಾರು). ಅನೇಕ ಭಕ್ತರು ಆ ಮನೆಗಳೊಳಗೆ ಹೋಗಿ ತಮ್ಮ ಹೊಳೆಯುತ್ತಿದ್ದ ಕಿರೀಟಗಳನ್ನು ತೆಗೆದು ಅಲಮಾರಿನಲ್ಲಿಡುವುದನ್ನೂ ಹಾಗು ಹೊಲಗಳಿಗೆ ಹೋಗಿ ಏನೋ ಕೆಲಸ ಮಾಡುವುದನ್ನು ಶ್ರೀಮತಿ ವೈಟಮ್ಮನವರು ನೋಡಿದರು. (ಕೆಲಸ ಮಾಡುವುದೆಂದರೆ ಈ ಲೋಕದಲ್ಲಿ ಹೊಲಗಳಲ್ಲಿ ರೈತರು ಕೆಲಸ ಮಾಡುವಂತದ್ದಲ್ಲ) ಅವರ ತಲೆಗಳ ಮೇಲೆ ಅತ್ಯಂತ ಮಹಿಮೆಯುಳ್ಳ ಬೆಳಕು ಪ್ರಕಾಶಿಸುತ್ತಿತ್ತು. ಅವರು ನಿರಂತರವಾಗಿ ದೇವರಿಗೆ ಸ್ತುತಿಸುತ್ತಾ ಜಯಘೋಷ ಮಾಡುತ್ತಿದ್ದರು.KanCCh 4.3

    ಶ್ರೀಮತಿ ವೈಟಮ್ಮನವರು ನಾನಾ ವಿಧವಾದ ಹೂಗಳು ತುಂಬಿದ್ದ ಮತ್ತೊಂದು ಹೊಲವನ್ನು ನೋಡಿದರು. ಅವುಗಳನ್ನು ಅವರು ಕಿತ್ತಾಗ, ಈ ಹೂಗಳು ಎಂದೆಂದಿಗೂ ಬಾಡುವುದಿಲ್ಲವೆಂದು ಸಂತೋಷದಿಂದ ಅವರು ಕೂಗಿದರು. ಅನಂತರ ಶ್ರೀಮತಿ ವೈಟಮ್ಮನವರು ಎತ್ತರವಾದ ಹುಲ್ಲುಗಾವಲನ್ನು ನೋಡಿದರು. ಅದು ನೋಡಲು ಅತ್ಯಂತ ಸೊಬಗಿನಿಂದ ಕೂಡಿತ್ತು. ಅದು ಅಚ್ಚಹಸುರಿನಿಂದ ನಳನಳಿಸುತ್ತಿದ್ದು, ಬೆಳ್ಳಿ ಹಾಗೂ ಬಂಗಾರವು ಒಟ್ಟಾಗಿ ಪ್ರತಿಫಲಿಸಿದಂತೆ ಕಾಣುತ್ತಿತ್ತು. ಆಮೇಲೆ ರಕ್ಷಿಸಲ್ಪಟ್ಟವರು ಸಿಂಹ, ಕುರಿಮರಿ, ಚಿರತೆ, ತೋಳ ಮುಂತಾದ ವಿವಿಧ ರೀತಿಯ ಪ್ರಾಣಿಗಳಿದ್ದ ಮತ್ತೊಂದು ಸ್ಥಳವನ್ನು ಕಂಡರು. ಅವೆಲ್ಲವೂ ಪರಿಪೂರ್ಣ ಸಾಮರಸ್ಯದಿಂದ ಇದ್ದವು. ಭಕ್ತರು ಅವುಗಳ ನಡುವೆ ಹಾದು ಹೋದಾಗ ಆ ಪ್ರಾಣಿಗಳು ಶಾಂತರೀತಿಯಿಂದ ಅವರ ಹಿಂದೆ ಹೋದವು (ಯೆಶಾಯ 11:6-8) ಅನಂತರ ಅವರು ಒಂದು ಕಾಡನ್ನು ಪ್ರವೇಶಿಸಿದರು. ಅದು ನಮ್ಮ ಭೂಲೋಕದಲ್ಲಿ ದಟ್ಟವಾದ ಮರಗಳಿಂದ ಆವರಿಸಿಕೊಂಡು ಕತ್ತಲಾಗಿರುವ ಕಾಡಿನಂತೆ ಇರಲಿಲ್ಲ. ಆದರೆ ಆ ಕಾಡಿನಲ್ಲಿ ಎಲ್ಲೆಲ್ಲಿಯೂ ದಿವ್ಯವಾದ ಬೆಳಕಿತ್ತು. ಅದನ್ನು ನೋಡಿದ ಭಕ್ತರೆಲ್ಲರೂ “ನಾವು ಈ ಕಾಡಿನಲ್ಲಿ ಸುರಕ್ಷಿತವಾಗಿ ವಾಸಿಸುವೆವು, ಈ ಅಡವಿಯಲ್ಲಿ ಸಮಾಧಾನದಿಂದ ನಿದ್ರಿಸುವೆವು” ಎಂದು ಜಯಘೋಷ ಮಾಡಿದರು. (ಯೆಶಾಯ 65:21; ಯೆಹೆಜ್ಕೇಲನು 28:6) ಅವರೆಲ್ಲರೂ ಕಾಡನ್ನು ದಾಟಿ ಚೀಯೋನ್ ಪರ್ವತಕ್ಕೆ ಹೊರಟರು.KanCCh 5.1

    ಭಕ್ತರೆಲ್ಲರೂ ಚೀಯೋನ್ ಪರ್ವತಕ್ಕೆ ಹೋಗುತ್ತಿರುವಾಗ, ಅಲ್ಲಿನ ವೈಭವವನ್ನು ಬೆರಗಿನಿಂದ ನೋಡುತ್ತಿದ್ದ ಮತ್ತೊಂದು ಗುಂಪಿನ ಜನರನ್ನು ಕಂಡರು. ಅವರ ನಿಲುವಂಗಿಗಳಲ್ಲಿ ಕೆಂಪುಬಣ್ಣದ ಅಂಚು ಇರುವುದನ್ನು ಶ್ರೀಮತಿ ವೈಟಮ್ಮನವರು ಗಮನಿಸಿದರು. ಅವರ ನಿಲುವಂಗಿಗಳು ಹಿಮದಂತೆ ಬಿಳುಪಾಗಿದ್ದವು ಮತ್ತು ಅವರ ಕಿರೀಟಗಳು ಅತ್ಯಂತ ಶೋಭಾಯಮಾನವಾಗಿದ್ದವು. ಶ್ರೀಮತಿ ವೈಟಮ್ಮನವರು ಆ ಮತ್ತೊಂದು ಗುಂಪಿನವರು ಯಾರೆಂದು ಯೇಸುಸ್ವಾಮಿಯನ್ನು ಕೇಳಿದರು. ಅದಕ್ಕೆ ಕ್ರಿಸ್ತನು ಇವರು ತನಗೋಸ್ಕರ ಕೊಲೆಯಾಗಿದ್ದ ರಕ್ತಸಾಕ್ಷಿಗಳಾಗಿದ್ದಾರೆಂದು ಉತ್ತರಿಸಿದನು. ಇವರೊಂದಿಗೆ ಅಸಂಖ್ಯಾತ ಸಂಖ್ಯೆಯಲ್ಲಿ ಚಿಕ್ಕ ಮಕ್ಕಳಿದ್ದರು. ಅವರ ವಸ್ತ್ರಗಳ ಅಂಚುಗಳು ಕೆಂಪುಬಣ್ಣದ್ದಾಗಿತ್ತು. ಚೀಯೋನ್ ಪರ್ವತವು ಸ್ವಲ್ಪ ಮುಂದೆ ಇತ್ತು ಹಾಗೂ ಪರ್ವತದ ಮೇಲೆ ಅತ್ಯಂತ ವೈಭವವೂ, ಅದ್ಭುತವೂ ಆದ ದೇವಾಲಯವಿತ್ತು ಮತ್ತು ಅದರ ಸುತ್ತಲೂ ಇತರ ಏಳು ಬೆಟ್ಟಗಳಿದ್ದವು. ಅವುಗಳಲ್ಲಿ ಗುಲಾಬಿ ಮತ್ತು ಎಳೆಬಿಳುಪಿನ ನೆಲನೈದಿಲೆ ಹೂಗಳಿದ್ದವು. ಚಿಕ್ಕಮಕ್ಕಳು ಆ ಬೆಟ್ಟಗಳನ್ನು ಹತ್ತುತ್ತಿದ್ದರು ಹಾಗೂ ಬೇಕೆನಿಸಿದಾಗ ತಮ್ಮ ಪುಟ್ಟ ರೆಕ್ಕೆಗಳಿಂದ ಅಲ್ಲಿಗೆ ಹಾರಿಹೋಗಿ ಎಂದೆಂದಿಗೂ ಬಾಡಿಹೋಗದ ಹೂಗಳನ್ನು ಕೀಳುತ್ತಿದ್ದರು. ದೇವಾಲಯದ ಸುತ್ತಲೂ ಎಲ್ಲಾ ವಿಧವಾದ ಮರಗಳಿದ್ದು ಆ ಸ್ಥಳವನ್ನು ಸೌಂದರ್ಯಗೊಳಿಸಿದ್ದವು. ಬಾಕ್ಸ್‍ಗಿಡ (ಕಪ್ಪು ಬಣ್ಣದ ಮಂದವಾದ ಎಲೆಗಳುಳ್ಳ ನಿತ್ಯವೂ ಹಸಿರಾಗಿರುವ ಒಂದು ಸಸ್ಯ ಜಾತಿ). ಭದ್ರದಾರು ಅಂದರೆ ಫರ್‍ಮರ್ (Fir), ಪೀತದಾರು (ಪೈನ್), ಎಣ್ಣೇಮರ ಹಾಗೂ ಮರ್ಟಲ್ ಗಿಡಗಳಿದ್ದವು (Myrtle, ನೇರಳೆ ಹಾಗೂ ಪನ್ನೇರಳೆಯ ಬಳಗಕ್ಕೆ ಸೇರಿದ, ಹೊಳಪಿನ ನಿತ್ಯ ಹಸಿರುಎಲೆಗಳುಳ್ಳ, ಸುವಾಸನೆಯುಳ್ಳ ಬಿಳಿಯಹೂ ಬಿಡುವ ಒಂದು ಗಿಡ). ಅಲ್ಲದೆ ದಾಳಿಂಬೆ, ಅಂಜೂರದ ಹಣ್ಣುಗಳ ಮರಗಳಿಂದ ಕೂಡಿದ್ದ ಆ ಸ್ಥಳವು ಅತ್ಯಂತ ಸೊಗಸಾಗಿಯೂ, ಮನೋಹರವಾಗಿಯೂ ಇತ್ತು. ದೇವಜನರು ಪರಿಶುದ್ಧ ದೇವಾಲಯದೊಳಕ್ಕೆ ಹೋಗಬೇಕೆಂದು ಬಯಸಿದಾಗ, ಯೇಸುಸ್ವಾಮಿ ಅತ್ಯಂತ ಮಧುರವಾದ ಸ್ವರದಿಂದ ಈ ದೇವಾಲಯಕ್ಕೆ 144,000 ಜನರು ಮಾತ್ರ ಹೋಗುವರು ಎಂದು ಹೇಳಿದನು. ಆಗ ಭಕ್ತರೆಲ್ಲರೂ ಹಲ್ಲೆಲೂಯಾ! ಎಂದು ಜಯಘೊಷ ಮಾಡಿದರು. ಪಾರದರ್ಶಕವಾದ ಬಂಗಾರ ಮತ್ತು ಮುತ್ತಿನಿಂದ ವೈಭವವಾಗಿ ಮಾಡಲ್ಪಟ್ಟಿದ್ದ ಏಳು ಕಂಬಗಳು ದೇವಾಲಯಕ್ಕೆ ಆಧಾರವಾಗಿದ್ದವು. ಅಲ್ಲಿ ನಾನು ನೋಡಿದ ವಿಸ್ಮಯಕರ ದೃಶ್ಯವನ್ನು ತನ್ನಿಂದ ವರ್ಣಿಸಲಾಗದೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಓಹ್! ಹೊಸ ಯೆರೂಸಲೇಮಿನ ಭಾಷೆ ನನಗೆ ತಿಳಿದಿದ್ದಲ್ಲಿ, ದರ್ಶನದಲ್ಲಿ ನಾನು ಕಂಡ ಪರಲೋಕದ ವೈಭವ, ಮಹಿಮೆಯನ್ನು ವರ್ಣಿಸ ಬಹುದಿತ್ತೇನೋ! ಅಲ್ಲಿ 144,000 ಜನರ ಹೆಸರುಗಳನ್ನು ಬಂಗಾರದಿಂದ ಕೆತ್ತಿದ ಕಲ್ಲಿನ ಫಲಕಗಳಿದ್ದವು. ದೇವಾಲಯದ ವೈಭವವನ್ನು ನೋಡಿದ ನಂತರ, ಯೇಸುಕ್ರಿಸ್ತನು ಭಕ್ತರನ್ನು ಬಿಟ್ಟು ಹೊಸ ಯೆರೂಸಲೇಮ್ ಪಟ್ಟಣದೊಳಕ್ಕೆ ಹೋದನು.KanCCh 6.1

    ಶೀಘ್ರದಲ್ಲಿಯೇ ಯೇಸುಕ್ರಿಸ್ತನು ತನ್ನ ಮಧುರ ಸ್ವರದಿಂದ ದೇವಜನರಿಗೆ “ನನ್ನಬಳಿಗೆ ಬನ್ನಿರಿ; ನೀವು ಮಹಾಹಿಂಸೆ ಅನುಭವಿಸಿ ನನ್ನ ಚಿತ್ತ ನೆರವೇರಿಸಿದ್ದೀರಿ. ನಾನುಸಿದ್ಧಪಡಿಸಿದ ಔತಣಕ್ಕೆ ಬನ್ನಿರಿ. ನಾನೇ ನಿಮಗೆ ಬಡಿಸುವೆನು” ಎಂದು ಹೇಳಿದನು. ಆಗರಕ್ಷಿಸಲ್ಪಟ್ಟ ಭಕ್ತರು ಹಲ್ಲೆಲೂಯಾ! ಎಂದು ಜಯಘೋಷ ಮಾಡುತ್ತಾ ಪಟ್ಟಣದೊಳಕ್ಕೆಪ್ರವೇಶಿಸಿದರು. ಶ್ರೀಮತಿ ವೈಟಮ್ಮನವರು ಅಲ್ಲಿ ಚೊಕ್ಕ ಬೆಳ್ಳಿಯ ಒಂದು ಮೇಜನ್ನುನೋಡಿದರು. ಅದು ಅನೇಕ ಮೈಲುಗಳ ಉದ್ದವಿದ್ದರೂ, ಎಲ್ಲರೂ ಅದನ್ನು ಅಲ್ಲಿಯವರೆಗೂನೋಡಬಹುದಿತ್ತು. ಚೊಕ್ಕಬೆಳ್ಳಿಯ ಆ ಮೇಜಿನ ಮೇಲೆ ಜೀವವೃಕ್ಷದ ಹಣ್ಣುಗಳು,ಮನ್ನ, ಬಾದಾಮಿ, ಅಂಜೂರ, ದ್ರಾಕ್ಷಿ, ದಾಳಿಂಬೆ ಮುಂತಾದ ಇನ್ನೂ ಅನೇಕ ವಿಧವಾದಹಣ್ಣುಗಳಿದ್ದವು. ಆ ಹಣ್ಣುಗಳನ್ನು ನಾನು ತಿನ್ನಬಹುದೇ? ಎಂದು ಶ್ರೀಮತಿ ವೈಟಮ್ಮನವರುಯೇಸುಸ್ವಾಮಿಯನ್ನು ಕೇಳಿದರು. ಅದಕ್ಕೆ ಯೇಸುಸ್ವಾಮಿಯು “ಈಗಲ್ಲ, ಯಾಕೆಂದರೆಈ ಹಣ್ಣುಗಳನ್ನು ತಿಂದವರು ತಿರುಗಿ ಭೂಲೋಕಕ್ಕೆ ಹೋಗಲಾಗದು. ಆದರೆ ನೀನುನಂಬಿಗಸ್ತಳಾಗಿದ್ದಲ್ಲಿ, ಜೀವವೃಕ್ಷದ ಹಣ್ಣನ್ನು ತಿಂದು, ಜೀವಜಲದ ನದಿಯ ನೀರನ್ನುಕುಡಿಯುವಿ” ಎಂದು ಶ್ರೀಮತಿ ವೈಟಮ್ಮನವರಿಗೆ ಹೇಳಿದನು. ಅಲ್ಲದೆ “ನೀನು ಲೋಕಕ್ಕೆತಿರುಗಿ ಹೋಗಿ ನಾನು ನಿನಗೆ ತೋರಿಸಿದವುಗಳನ್ನು ಇತರರಿಗೆ ತಿಳಿಸಬೇಕು” ಎಂದುಕ್ರಿಸ್ತನು ಅವರಿಗೆ ತಿಳಿಸಿದನು. ಅನಂತರ ಒಬ್ಬ ದೇವದೂತನು ಶ್ರೀಮತಿ ವೈಟಮ್ಮನವರನ್ನುನಿಧಾನವಾಗಿ ಭೂಲೋಕಕ್ಕೆ ಕರೆದು ತಂದುಬಿಟ್ಟನು.KanCCh 7.1

    *****