ಕ್ರೈಸ್ತರಾದ ನಾವು ಕಷ್ಟಸಂಕಟಗಳನ್ನು ತಾಳಿಕೊಳ್ಳಬೇಕೆಂದು ಕರೆಯಲ್ಪಟ್ಟಿದ್ದೇವೆ. ಇದರಿಂದ ದೇವರು ನಮ್ಮಲ್ಲಿ ಏನೋ ಅಮೂಲ್ಯವಾದದ್ದನ್ನು ನೋಡಿದ್ದಾನೆ ಹಾಗೂ ಅದನ್ನು ಉನ್ನತಪಡಿಸಲು ಬಯಸುತ್ತಾನೆ. ದೇವರ ನಾಮಕ್ಕೆ ಮಹಿಮೆತರುವಂತ ಯಾವುದೂ ನಮ್ಮಲ್ಲಿಲ್ಲದಿದ್ದಲ್ಲಿ ಆತನು ನಮ್ಮ ಗುಣ ಸ್ವಭಾವಗಳನ್ನು ಚೊಕ್ಕದಾಗುವಂತೆ ಪರಿಷ್ಕರಿಸುವುದಿಲ್ಲ. ಮುಳ್ಳು ಪೊದೆಗಳನ್ನು ನಾವು ವಿಶೇಷವಾದ ಶ್ರಮವಹಿಸಿ ಕತ್ತರಿಸಿ ಒಪ್ಪಗೊಳಿಸುವುದಿಲ್ಲ. ಕೆಲಸಕ್ಕೆ ಬಾರದ ಕಲ್ಲುಗಳನ್ನು ದೇವರು ಕುಲುಮೆಗೆ ಹಾಕಿ ಪರಿಷ್ಕರಿಸುವುದಿಲ್ಲ. ಅಮೂಲ್ಯವಾದ ಬೆಲೆಬಾಳುವ ಲೋಹಗಳನ್ನು ಮಾತ್ರ ಆತನು ಪರೀಕ್ಷಿಸುತ್ತಾನೆ. KanCCh 35.2
ತನ್ನ ಸಭೆಯಲ್ಲಿಯೇ ಆಗಲಿ ಅಥವಾ ಲೋಕದಲ್ಲಿಯಾಗಲಿ ತನ್ನ ಮಕ್ಕಳು ಜವಾಬ್ದಾರಿಯುತ ಅಧಿಕಾರಕ್ಕೆ ಬರಬೇಕೆಂದು ದೇವರು ಬಯಸಿದಾಗ ಅವರು ವಿಮರ್ಶಾತ್ಮಕವಾಗಿ ತಮ್ಮ ತಪ್ಪುಗಳನ್ನು ಪರೀಕ್ಷಿಸಿಕೊಳ್ಳುವಂತೆ ಆತನು ಕೃಪೆಯಿಂದಲೇ ಅವರ ಬಲಹೀನತೆ ಲೋಪದೋಷಗಳನ್ನು ತಿಳಿಯಪಡಿಸುತ್ತಾನೆ. ಅದರ ನಿಮಿತ್ತ ಅವರು ತಮ್ಮ ಗುಣನಡತೆಗಳನ್ನು ಬದಲಾಯಿಸಿಕೊಳ್ಳಬೇಕು. ದೇವರು ತನ್ನ ಅನುಗ್ರಹದಿಂದ ತನ್ನ ಮಕ್ಕಳ ನೈತಿಕ ಶಕ್ತಿಯನ್ನು ಪರೀಕ್ಷಿಸುವಂತ ಸನ್ನಿವೇಶ ಉಂಟುಮಾಡಿ, ಅವರ ಕಾರ್ಯಗಳ ಉದ್ದೇಶಗಳನ್ನು ಹೊರಪಡಿಸುತ್ತಾನೆ. ಇದರಿಂದ ಅವರು ತಮ್ಮಲ್ಲಿರುವ ಕೆಟ್ಟದ್ದನ್ನು ತೆಗೆದುಹಾಕಿ ಒಳ್ಳೆಯ ಗುಣಗಳನ್ನು ಇನ್ನೂ ಉತ್ತಮಪಡಿಸಿಕೊಳ್ಳುವ ಅವಕಾಶ ದೊರೆಯಲಿದೆ. ದೇವರು ತನ್ನ ಮಕ್ಕಳ ನೈತಿಕ ಸಾಮರ್ಥ್ಯಉತ್ತಮಪಡಿಸಿಕೊಳ್ಳುವಂತೆಯೂ ಅವರು ಶುದ್ಧಗೊಳಿಸಲ್ಪಡುವಂತೆಯೂ ಕಷ್ಟ ಸಂಕಟಗಳು ಬರುವಂತೆ ಅನುಮತಿ ನೀಡುತ್ತಾನೆ. “ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಚೌಳಿಗೂ ಸಮಾನವಾಗಿದ್ದಾನೆ. ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿವಂಶದವರನ್ನು ಶೋಧಿಸಿ ಬೆಳ್ಳಿ ಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು” (ಮಲಾಕಿಯ 3:2,3). KanCCh 35.3
ದೇವರು ಹಂತಹಂತವಾಗಿ ತನ್ನ ಜನರನ್ನು ನಡೆಸುತ್ತಾನೆ. ಅವರ ಹೃದಯಗಳಲ್ಲಿ ಏನಿದೆ ಎಂದು ತೋರ್ಪಡಿಸಲು ವಿವಿಧ ಹಂತಗಳಲ್ಲಿ ಅವರ ಮೇಲೆ ಕಷ್ಟಸಂಕಟಗಳನ್ನು ಬರಮಾಡುತ್ತಾನೆ. ಕೆಲವರು ಒಂದು ಹಂತದವರೆಗೆ ಸಹಿಸಿಕೊಂಡು, ಅನಂತರ ಬಿದ್ದುಹೋಗುತ್ತಾರೆ. ಮುಂದಿನ ಪ್ರತಿಯೊಂದು ಹಂತಗಳಲ್ಲಿಯೂ ಹೃದಯವನ್ನು ಇನ್ನೂ ಸ್ವಲ್ಪ ಹೆಚ್ಚಾಗಿ ಪರೀಕ್ಷಿಸುತ್ತಾನೆ. ದೇವರ ಮಕ್ಕಳೆಂದು ಹೇಳಿಕೊಳ್ಳುವವರು ಆತನ ಈ ಪರೀಕ್ಷೆಗೆ ಒಳಪಡಲು ವಿರುದ್ಧವಾಗಿದ್ದಲ್ಲಿ, ಅವರು ಅದನ್ನು ಜಯಿಸಬೇಕೆಂದು ಮನವರಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಕರ್ತನು ಅವರನ್ನು ತನ್ನ ಬಾಯಿಂದ ಕಾರಿಬಿಡುವನು. KanCCh 36.1
ದೇವರ ಸೇವೆ ಮಾಡಲು ನಾವು ಅಸಮರ್ಥರೆಂದು ನಮಗೆ ಅರಿವಾದ ತಕ್ಷಣವೇ ಆತನ ವಿವೇಕವುಳ್ಳ ಮಾರ್ಗದರ್ಶನಕ್ಕೆ ನಮ್ಮನ್ನು ಒಪ್ಪಿಸಿಕೊಟ್ಟಲ್ಲಿ, ಆತನು ನಮ್ಮಲ್ಲಿ ತನ್ನ ಕಾರ್ಯಮಾಡುವನು. ನಮ್ಮೆಲ್ಲಾ ಸ್ವಾರ್ಥ, ಅಹಂಕಾರ ಬಿಟ್ಟಲ್ಲಿ ದೇವರು ನಮ್ಮೆಲ್ಲಾ ಅಗತ್ಯಗಳನ್ನು ಪೂರೈಸುವನು. KanCCh 36.2