ದೇವರು ನಿಮ್ಮನ್ನು ಅಂಗೀಕರಿಸಿಕೊಂಡಿದ್ದಾನೆಂದು ನೀವು ಹೇಗೆ ತಿಳಿಯಬಹುದು? ಪ್ರಾರ್ಥನಾ ಪೂರ್ವಕವಾಗಿ ಸತ್ಯವೇದ ಅಧ್ಯಯನಮಾಡಿರಿ. ಇತರ ಪುಸ್ತಕಗಳನ್ನು ಓದುವುದಕ್ಕಾಗಿ ದೇವರ ವಾಕ್ಯವನ್ನು ಕಡೆಗಣಿಸಬಾರದು. ಸತ್ಯವೇದವು ನಮ್ಮಲ್ಲಿ ಪಾಪದ ಅರುಹು ಹುಟ್ಟಿಸುತ್ತದೆ. ರಕ್ಷಣೆಯ ಮಾರ್ಗವನ್ನು ಅದು ನೇರವಾಗಿ ತಿಳಿಸುತ್ತದೆ. ಮುಂದೆ ನಮಗೆ ದೊರೆಯುವ ಅಮೂಲ್ಯವಾದ ಹಾಗೂ ಮಹಿಮೆಯುಳ್ಳ ಪ್ರತಿಫಲವನ್ನು ನೆನಪಿಗೆ ತರುತ್ತದೆ. ಪರಿಪೂರ್ಣವಾದ ರಕ್ಷಕನನ್ನು ನಮಗೆ ತಿಳಿಯಪಡಿಸುವುದಲ್ಲದೆ, ಆತನ ಅಪಾರವಾದ ಕರುಣೆಯಿಂದಲೇ ನಾವು ರಕ್ಷಣೆಯನ್ನು ನಿರೀಕ್ಷಿಸಬಹುದೆಂದು ಬೋಧಿಸುತ್ತದೆ, ಏಕಾಂತದಲ್ಲಿ ಪ್ರಾರ್ಥಿಸುವುದನ್ನು ನಿರ್ಲಕ್ಷಿಸಬಾರದು, ಯಾಕೆಂದರೆ ಇದು ನಿಜವಾದ ಧರ್ಮದ ಪ್ರಮುಖ ಭಾಗವಾಗಿದೆ. ಎಡೆಬಿಡದ, ಮನಃಪೂರ್ವಕವಾದ ಪ್ರಾರ್ಥನೆಯ ಮೂಲಕ ನಮ್ಮನ್ನು ಶುದ್ಧಗೊಳಿಸಬೇಕೆಂದು ದೇವರಲ್ಲಿ ಮೊರೆಯಿಡಬೇಕು. ನಮ್ಮ ನಾಶವಾಗುವ ಪ್ರಾಣವು ಅಪಾಯದಲ್ಲಿದೆ ಎಂಬಂತೆ ದೇವರ ಮುಂದೆ ಶ್ರದ್ಧೆಯಿಂದ ಬೇಡಿಕೊಳ್ಳಿರಿ. ರಕ್ಷಣೆಯ ಭರವಸೆ ಹಾಗೂ ಪಾಪವು ಕ್ಷಮಿಸಲ್ಪಟ್ಟಿದೆ ಎಂದು ನಿಮಗೆ ಮನವರಿಕೆ ಆಗುವ ತನಕ ದೇವರಿಗೆ ಪ್ರಾರ್ಥಿಸುವುದನ್ನು ಬಿಡಬಾರದು. KanCCh 36.3
ನಾವು ಎದುರಿಸಬೇಕಾದ ಕಷ್ಟಸಂಕಟಗಳ ವಿಷಯದಲ್ಲಿ ಕ್ರಿಸ್ತನು ನಮ್ಮನ್ನು ಕೈಬಿಟ್ಟಿಲ್ಲ. ಅವುಗಳ ಬಗ್ಗೆ ಆತನು ಮುಂದಾಗಿಯೇ ತಿಳಿಸಿದ್ದಾನೆ ಹಾಗೂ ಕಷ್ಟಸಂಕಟಗಳು, ಶೋಧನೆಗಳು ಬಂದಾಗ ನಿರಾಶೆಯಿಂದ ಕುಗ್ಗಿ ಹೋಗಬಾರದೆಂದೂ ಸಹ ಆತನು ಹೇಳಿದ್ದಾನೆ. ಇಂತಹ ಸಂದರ್ಭಗಳಲ್ಲಿ ರಕ್ಷಕನಾದ ಯೇಸುವನ್ನು ದೃಷ್ಟಿಸಿ ನೋಡಿ ಸಂತೋಷಪಡಬೇಕು. ಸಹಿಸಿಕೊಳ್ಳಲು ಬಹಳ ಕಠಿಣವಾಗಿರುವಂತ ಕಷ್ಟಸಂಕಟಗಳು ನಮ್ಮ ಕ್ರೈಸ್ತ ಸಹೋದರರಿಂದಲೂ ಹಾಗೂ ಆತ್ಮೀಯ ಸ್ನೇಹಿತರಿಂದಲೂ ಬರುತ್ತವೆ. ಆದರೆ ಇವುಗಳನ್ನೂ ಸಹ ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಯೇಸುವು ಅರಿಮಥಾಯದ ಯೋಸೇಫನ ಸಮಾಧಿಯಲ್ಲಿ ನಿದ್ರಿಸುತ್ತಿಲ್ಲ. ಆತನು ನಮಗೋಸ್ಕರ ತಂದೆಯ ಮುಂದೆ ಬೇಡಿಕೊಳ್ಳುವುದಕ್ಕಾಗಿ, ಪುನರುತ್ಥಾನಗೊಂಡು ಪರಲೋಕಕ್ಕೆ ಏರಿ ಹೋಗಿದ್ದಾನೆ. ನಮಗೆ ನಿರೀಕ್ಷೆ, ಬಲ ಹಾಗೂ ಧೈರ್ಯ ಕೊಡುವುದಕ್ಕಾಗಿಯೂ ತನ್ನ ಸಿಂಹಾಸನದಲ್ಲಿ ನಮ್ಮನ್ನು ಕುಳ್ಳಿರಿಸುವಂತೆ ಮಾಡಲು ನಮ್ಮನ್ನು ಅಪಾರವಾಗಿ ಪ್ರೀತಿಸಿ ನಮಗಾಗಿ ತನ್ನ ಪ್ರಾಣಕೊಟ್ಟ ರಕ್ಷಕನು ನಮಗಿದ್ದಾನೆ. ನಾವು ಆತನನ್ನು ಬೇಡಿಕೊಂಡಾಗ, ನಮಗೆ ಸಹಾಯ ಮಾಡಲು ಆತನು ಇಚ್ಛಿಸುತ್ತಾನೆ ಹಾಗೂ ಸಮರ್ಥನಾಗಿದ್ದಾನೆ. KanCCh 37.1