Go to full page →

ದೇವಾಲಯಕ್ಕೆ ಬರುವಾಗ ಉಡುಪು ಹೇಗಿರಬೇಕು? KanCCh 318

ದೇವಾಲಯಕ್ಕೆ ಬರುವಾಗ ವಿಶ್ವಾಸಿಗಳು ಶುಭ್ರವಾದ, ಸರಳವಾದ ಆದರೆ ಅಂದವಾದ ಬಟ್ಟೆಗಳನ್ನು ಧರಿಸಿ ಬರಬೇಕು. ಆದರೆ ಅತಿಯಾದ ಅಲಂಕಾರ ಮಾಡಬಾರದು. ಇದು ದೇವಾಲಯಕ್ಕೆ ಸೂಕ್ತವಲ್ಲ. ಬಹಳ ಬೆಲೆಬಾಳುವ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಪ್ರದರ್ಶನ ಮಾಡಬಾರದು; ಇದರಿಂದ ದೇವಾಲಯದಲ್ಲಿ ಅಗೌರವಕ್ಕೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ಜನರ ಗಮನ ಅಂತವರ ಮೇಲೆ ಹೆಚ್ಚಾಗುತ್ತದೆ ಹಾಗೂ ಇದರ ಬಗ್ಗೆಯೇ ಅವರು ಆಲೋಚಿಸುವುದರಿಂದ ದೇವರವಾಕ್ಯ ಕೇಳಲು ಮನಸ್ಸು ಚಂಚಲವಾಗುತ್ತದೆ. ದೇವಾಲಯದಲ್ಲಿ ದೇವರ ಬಗ್ಗೆಯೇ ಆಲೋಚನೆ ಮಾಡಬೇಕು ಹಾಗೂ ಆತನೇ ನಮ್ಮ ಆರಾಧನೆಯ ಕೇಂದ್ರಬಿಂದುವಾಗಿರಬೇಕು. ಗಂಭೀರವಾದ ಮತ್ತು ಪರಿಶುದ್ಧ ದೇವಾರಾಧನೆಯಿಂದ ನಮ್ಮ ಮನಸ್ಸನ್ನು ಬೇರೆ ಕಡೆಗೆ ಆಕರ್ಷಿಸುವ ಯಾವುದೇ ಆದರೂ ದೇವರಿಗೆ ಅಸಮಾಧಾನ ಉಂಟುಮಾಡುತ್ತದೆ. KanCCh 318.1

ಉಡುಪಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲಿಯೂ ಸತ್ಯವೇದದ ನಿಯಮಗಳನ್ನು ಶಿಸ್ತಿನಿಂದ ಅನುಸರಿಸಬೇಕು. ಜಗತ್ತಿನಲ್ಲಿ ಇತರರಿಗೆ ಫ್ಯಾಷನ್ ಎಂಬುದು ದೇವತೆಯಾಗಿದ್ದು, ಅವರು ಅದರಲ್ಲಿಯೇ ಮುಳುಗಿದ್ದಾರೆ. ಅಲ್ಲದೆ ಸಭೆಯೊಳಗೂ ಸಹ ಇದು ಅಕ್ರಮವಾಗಿ ನುಸುಳಿದೆ, ದೇವರವಾಕ್ಯವು ಸಭೆಗೆ ಮಾನದಂಡ ಆಗಿರಬೇಕು. ತಂದೆತಾಯಿಗಳು ತಮ್ಮ ಮಕ್ಕಳ ಉಡುಪು, ವೇಷಭೂಷಣದ ವಿಷಯದಲ್ಲಿ ವಿವೇಕದಿಂದ ಆಲೋಚಿಸಬೇಕು. ಮಕ್ಕಳು ಲೋಕದ ರೀತಿಯಲ್ಲಿ ಆಧುನಿಕ ಫ್ಯಾಷನ್‌ಗೆ ದಾಸರಾಗಿ ಅದನ್ನು ಅನುಸರಿಸಲು ಪ್ರಯತ್ನಿಸಿದಾಗ, ತಂದೆತಾಯಿಯರು ಅಬ್ರಹಾಮನಂತೆ ತಮ್ಮ ಕುಟುಂಬದ ಮೇಲೆ ಬಲವಾದ ಹಿಡಿತ ಹೊಂದಿರಬೇಕು. ಮಕ್ಕಳು ಲೋಕದೊಂದಿಗೆ ಒಂದಾಗುವುದಕ್ಕೆ ಬದಲಾಗಿ, ದೇವರೊಂದಿಗೆ ಸಂಬಂಧಹೊಂದುವಂತೆ ಮಾಡಬೇಕು. ಯಾರೂಸಹ ತಮ್ಮ ಆಡಂಬರದ ವೇಷಭೂಷಣದಿಂದ ದೇವಾಲಯಕ್ಕೆ ಅಗೌರವ ತರಬಾರದು. ದೇವರು ಹಾಗೂ ದೇವದೂತರು ಅಲ್ಲಿರುತ್ತಾರೆ. ಪರಿಶುದ್ಧನಾದ ದೇವರು ತನ್ನ ಅಪೋಸ್ತಲನಾದ ಪೇತ್ರನ ಮೂಲಕ “ಜಡೆಹೆಣೆದುಕೊಳ್ಳುವುದು, ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದು, ವಸ್ತ್ರಗಳನ್ನು ಧರಿಸುವುದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದು, ದೇವರ ದೃಷ್ಟಿಗೆ ಬಹುಬೆಲೆಯುಳ್ಳದ್ದೂ ಆಗಿದೆ” ಎಂದು ಹೇಳಿದ್ದಾನೆ (1 ಪೇತ್ರನು 3:4,5). KanCCh 318.2