Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಿತಿ ಮೀರಿದ ಶಿಸ್ತು ಹಾಗೂ ಶಿಕ್ಷೆಯಿಂದಾಗುವ ಅಪಾಯಗಳು

    ಅನೇಕ ಕುಟುಂಬಗಳಲ್ಲಿ ಮಕ್ಕಳು ತಂದೆ-ತಾಯಿಯರ ಶಿಸ್ತಿಗೆ ಒಳಪಟ್ಟವರಂತೆ ಕಂಡುಬರುತ್ತಾರೆ. ಆದರೆ ಈ ನಿಯಮಗಳ ವ್ಯವಸ್ಥೆಯು ಸಡಿಲಗೊಂಡಾಗ, ಅವರು ಸ್ವತಂತ್ರವಾಗಿ ಆಲೋಚಿಸುವುದಕ್ಕೂ, ನಿರ್ಣಯ ತೆಗೆದುಕೊಳ್ಳುವುದಕ್ಕೂ ಅಥವಾ ಕಾರ್ಯ ಮಾಡುವುದಕ್ಕೂ ಅಸಮರ್ಥರಂತೆ ಕಂಡುಬರುತ್ತಾರೆ. ಯೌವನಸ್ಥರು ತಮ್ಮ ಸ್ವಸಾಮರ್ಥ್ಯದಿಂದ ಸ್ವತಂತ್ರವಾಗಿ ಆಲೋಚಿಸುವುದಕ್ಕೂ ಹಾಗೂ ಕಾರ್ಯಮಾಡುವುದಕ್ಕೂ ಅವಕಾಶ ಕೊಡದಂತ ಮಿತಿಮೀರಿದ ಶಿಸ್ತು ಮತ್ತು ಶಿಕ್ಷೆಯು ಅವರು ನೈತಿಕವಾಗಿಯೂ ಮತ್ತು ಮಾನಸಿಕವಾಗಿಯೂ ದುರ್ಬಲರಾಗುವಂತೆ ಮಾಡುತ್ತದೆ. ಆದರೆ ಅವರಿಗೆ ಯೋಗ್ಯರೀತಿಯ ಮಾರ್ಗದರ್ಶನನೀಡಿ, ಅವರ ಸ್ವಂತಸಾಮರ್ಥ್ಯದಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಶಿಕ್ಷಣ ನೀಡಿದಲ್ಲಿ, ಅವರ ಚಿಂತನೆಗಳು ಬೆಳವಣಿಗೆ ಹೊಂದಿ, ಆತ್ಮಗೌರವದ ಭಾವನೆ ಉಂಟಾಗುವುದು. ಇಲ್ಲದಿದ್ದಲ್ಲಿ ಮಾನಸಿಕವಾಗಿಯೂ, ನೈತಿಕವಾಗಿಯೂ ಬಲಹೀನರಾಗಿರುವ ಅವರು ಜಗತ್ತಿನ ಮುಂದೆ ತಮಗೆ ಯೋಗ್ಯ ಶಿಕ್ಷಣ ದೊರೆಯಲಿಲ್ಲ, ಬದಲಾಗಿ ತಮ್ಮ ತಂದೆ-ತಾಯಿಯರು ಮತ್ತು ಶಿಕ್ಷಕರು ತಮಗೆ ಸೂಕ್ತವಾದ ಮಾರ್ಗದರ್ಶನ ನೀಡದೆ ಕ್ರೂರವಾದ ಶಿಕ್ಷೆಗೂ, ಶಿಸ್ತಿಗೂ ಒಳಪಡಿಸಿ ಪ್ರಾಣಿಗಳಂತೆ ಬೆಳೆಸಿದ್ದಾರೆಂದು ತೋರಿಸಿಕೊಳ್ಳುವರು.KanCCh 231.1

    ಬಲವಂತದಿಂದಾಗಲಿ ಅಥವಾ ಭಯದಿಂದಾಗಲಿ ಮಕ್ಕಳೊಂದಿಗೆ ಪ್ರಾಣಿಗಳಂತೆ ವರ್ತಿಸಿ, ಅವರನ್ನು ಹತೋಟಿಗೆ ತಂದಿದ್ದೇವೆಂದು ಹೊಗಳಿಕೊಳ್ಳುವ ತಂದೆ-ತಾಯಿಯರು ಮತ್ತು ಶಿಕ್ಷಕರು ಅವರ ಮುಂದಿನ ಭವಿಷ್ಯ ಹೇಗಿರುತ್ತದೆಂದು ತಿಳಿದುಕೊಂಡಿರುವುದಿಲ್ಲ. ಇಂತ ಮಕ್ಕಳು ಜೀವನದ ಜವಾಬ್ದಾರಿಗಳನ್ನು ಹೊರುವುದಕ್ಕೆ ಹೆಚ್ಚುಕಡಿಮೆ ಸಂಪೂರ್ಣವಾಗಿ ಸಿದ್ಧರಾಗಿರುವುದಿಲ್ಲ. ಈ ಮಕ್ಕಳು ಮುಂದೆ ತಮ್ಮ ಶಿಕ್ಷಕರು ಮತ್ತು ಪೋಷಕರಿಂದ ಸ್ವತಂತ್ರಗೊಂಡಾಗ, ತಪ್ಪಾದ ದಾರಿಹಿಡಿದು ಶೋಧನೆಗೆ ಒಳಗಾಗಿ ಪಾಪಮಾಡುವರು. ಈ ಲೋಕದ ಜೀವಿತದಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮಾತ್ರವಲ್ಲದೆ ಅವರ ಧಾರ್ಮಿಕ ಜೀವನದಲ್ಲಿಯೂ ಕುಂದುಕೊರತೆ ಕಂಡುಬರುವುದು. ಇಂತಹ ಮಕ್ಕಳಿಗೆ ಶಿಕ್ಷಣ ಹಾಗೂ ತರಬೇತಿ ನೀಡಿದ ಶಿಕ್ಷಕರು ಉತ್ತಮವಾದ ಶಿಕ್ಷಕರಾಗಲು ಸಾಧ್ಯವಿಲ್ಲ.KanCCh 231.2

    ಅತಿಯಾದ ಬಿಗುಮಾನದಿಂದ ಕೂಡಿದವರಾಗಿ, ಕರುಣೆಯಿಲ್ಲದೆ ನಿರ್ದಯವಾಗಿ ತಮ್ಮ ಅಧಿಕಾರ ಚಲಾಯಿಸುವ ತಂದೆ-ತಾಯಿಯರು ಮತ್ತು ಶಿಕ್ಷಕರು ತಮ್ಮ ಮಕ್ಕಳ ಹಾಗೂ ವಿದ್ಯಾರ್ಥಿಗಳ ಹೃದಯಗಳನ್ನು ಗೆಲ್ಲಲಾರರು. ಬದಲಾಗಿ ಮಕ್ಕಳೊಂದಿಗೆ ನಿಕಟವಾಗಿದ್ದು, ಅವರಿಗೆ ಪ್ರೀತಿತೋರಿಸಿ ಅವರ ಎಲ್ಲಾ ಪ್ರಯತ್ನಗಳಲ್ಲಿ ಆಸಕ್ತಿ ತೋರಿಸಿ, ಮಕ್ಕಳ ಆಟಪಾಟಗಳಲ್ಲಿ ತಾವೂ ಸಹ ಮಕ್ಕಳಂತಾಗಿ ಸೇರಿಕೊಳ್ಳುವ ತಂದೆ-ತಾಯಿಯರು ಮತ್ತು ಶಿಕ್ಷಕರು ಅವರನ್ನು ಸಂತೋಷಪಡಿಸುವುದಲ್ಲದೆ, ಅವರ ಪ್ರೀತಿ ಮತ್ತು ವಿಶ್ವಾಸಗಳಿಸಿಕೊಳ್ಳುವರು. 1 ಮಕ್ಕಳು ತಮ್ಮ ಪೋಷಕರು ಹಾಗೂ ಶಿಕ್ಷಕರ ಅಧಿಕಾರವನ್ನು ಪ್ರೀತಿಯಿಂದಲೂ, ಗೌರವದಿಂದಲೂ ಒಪ್ಪಿಕೊಳ್ಳುವರು.KanCCh 232.1

    ಅದೇ ಸಮಯದಲ್ಲಿ ಯೌವನಸ್ಥರು ತಮ್ಮ ಶಿಕ್ಷಕರು ಮತ್ತು ತಂದೆ ತಾಯಿಯರ ನಿರ್ಧಾರವನ್ನು ಅಲಕ್ಷಿಸಿ ಸ್ವತಂತ್ರವಾಗಿ ವರ್ತಿಸುವಂತೆ ಬಿಡಬಾರದು. ಅವರು ತಂದೆ ತಾಯಿಯರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದು ಅನುಭವಿಗಳ ನಿರ್ಧಾರಗಳನ್ನು ಗೌರವಿಸಬೇಕು. ಹಿರಿಯರ ಬುದ್ಧಿವಾದಗಳನ್ನು ಕೇಳುವುದರಿಂದಾಗುವ ಔಚಿತ್ಯವನ್ನು ಮಕ್ಕಳು ತಿಳಿದುಕೊಳ್ಳುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕು. ಆಗ ಅವರು ಸ್ವತಂತ್ರರಾಗಿ ಜೀವನ ನಡೆಸುವಾಗಲೂ, ಅವರ ಗುಣಸ್ವಭಾವವು ಅಸ್ಥಿರಗೊಳ್ಳದೆ ದೃಢವಾಗಿರುವುದು.KanCCh 232.2