Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-62 — ನಮ್ಮ ಮಹಾಯಾಜಕನಾದ ಕ್ರಿಸ್ತನು

    ಪರಲೋಕದ ದೇವದರ್ಶನದ ಗುಡಾರದಲ್ಲಿ ನಡೆಯುತ್ತಿರುವ ಕ್ರಿಸ್ತನ ಮಹಾಯಾಜಕ ಸೇವೆಯನ್ನು ಸರಿಯಾಗಿ ತಿಳಿದುಕೊಳ್ಳುವುದು ಅಡ್ವೆಂಟಿಸ್ಟರಾದ ನಮ್ಮ ನಂಬಿಕೆಯ ಅಸ್ತಿವಾರವಾಗಿದೆ.KanCCh 447.1

    ಈ ಲೋಕದಲ್ಲಿದ್ದ ದೇವದರ್ಶನ ಗುಡಾರವು ಬೆಟ್ಟದಲ್ಲಿ ದೇವರು ತೋರಿಸಿದ ಮಾದರಿಯ ಪ್ರಕಾರವೇ ಮೋಶೆಯಿಂದ ಕಟ್ಟಲ್ಪಟ್ಟಿತು (ವಿಮೋಚನಕಾಂಡ 25:8,9) “ಈ ಗುಡಾರವು ಈಗಿನ ಕಾಲದವರಿಗೋಸ್ಕರ ಒಂದು ಒಳಗಣ ಅರ್ಥವನ್ನು ಸೂಚಿಸುತ್ತದೆ. ಏನೆಂದರೆ ಅದರ ಕ್ರಮದಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳು ಯಜ್ಞಗಳೂ....” (ಇಬ್ರಿಯ 9:9). “ಪರಲೋಕ ವಸ್ತುಗಳಿಗೆ ಪ್ರತಿರೂಪವಾಗಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಸಾಕ್ಷಾತ್ ಪರಲೋಕದವುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಬೇಕು” (ಇಬ್ರಿಯ 9:23). “ಈತನು (ಅಂದರೆ ಕ್ರಿಸ್ತನು) ಪವಿತ್ರಸ್ಥಾನದಲ್ಲಿ ಅಂದರೆ ಮನುಷ್ಯನು ಹಾಕದೆ ಕರ್ತನೇಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ” (ಇಬ್ರಿಯ 8:2). ಅಪೋಸ್ತಲನಾದ ಯೋಹಾನನು ಪರಲೋಕದಲ್ಲಿರುವ ದೇವಾಲಯ ನೋಡಿದನು. ಅಲ್ಲಿ ಸಿಂಹಾಸನದ ಮುಂದೆ ಏಳುದೀಪಗಳು ಉರಿಯುತ್ತಿದ್ದವು (ಪ್ರಕಟನೆ 4:2,5).KanCCh 447.2

    ಪ್ರವಾದಿಯಾದ ಯೋಹಾನನು ಅಲ್ಲಿ ಪರಲೋಕದ ದೇವದರ್ಶನ ಗುಡಾರದ ಮೊದಲನೆಭಾಗವನ್ನು ಕಂಡನು. ಅಲ್ಲಿ ಉರಿಯುತ್ತಿದ್ದ ಏಳು ದೀಪಸ್ತಂಭಗಳು ಹಾಗೂ ಬಂಗಾರದ ಯಜ್ಞವೇದಿಕೆ ಇತ್ತು. ಅವು ಭೂಲೋಕದಲ್ಲಿದ್ದ ದೇವದರ್ಶನ ಗುಡಾರದ ಚಿನ್ನದ ಧೂಪಸ್ತಂಭ ಹಾಗೂ ಧೂಪಾರತಿಯನ್ನು ಪ್ರತಿನಿಧಿಸುತ್ತಿದ್ದವು. “ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು” (ಪ್ರಕಟನೆ 11:19). ಇದು ಮಹಾಪರಿಶುದ್ಧ ಸ್ಥಳವಾಗಿದ್ದು, ಯೋಹಾನನು ಅದನ್ನು ನೋಡಿದನು. ಒಡಂಬಡಿಕೆಯ ಮಂಜೂಷವು ದೇವರಾಜ್ಞೆಗಳನ್ನು ಇಟ್ಟಿರುವ, ಮೋಶೆಯು ಮಾಡಿಸಿದ ಪರಿಶುದ್ಧವಾದ ಮಂಜೂಷ ಪೆಟ್ಟಿಗೆಯನ್ನು ಸೂಚಿಸುತ್ತಿತ್ತು. KanCCh 447.3

    ಪರಲೋಕದಲ್ಲಿ ದೇವಾಲಯವನ್ನು ನೋಡಿದೆನೆಂದು ಯೋಹಾನನು ಹೇಳುತ್ತಾನೆ. ಕ್ರಿಸ್ತನು ನಮಗೋಸ್ಕರ ಯಾಜಕಸೇವೆ ಮಾಡುತ್ತಿರುವ ಈ ದೇವಾಲಯವು ಮೂಲಮಾದರಿಯಾಗಿದ್ದು, ಮೋಶೆಯು ಮಾಡಿಸಿದ್ದ ದೇವದರ್ಶನದ ಗುಡಾರವು ಅದರ ಛಾಯೆ ಅಂದರೆ ಪ್ರತಿರೂಪವಾಗಿತ್ತು.KanCCh 447.4

    ರಾಜಾಧಿರಾಜನ ವಾಸಸ್ಥಳವಾದ ಪರಲೋಕದ ದೇವಾಲಯದಲ್ಲಿ “ಲಕ್ಷೋಪಲಕ್ಷ ದೂತರು ಹಾಗೂ ಕೋಟ್ಯಾನುಕೋಟಿ ಕಿಂಕರರು ದೇವರ ಮುಂದೆ ನಿಂತು ಆತನನ್ನು ಸೇವಿಸುತ್ತಿದ್ದರು (ದಾನಿಯೇಲನು 7:10). ಆ ದೇವಾಲಯವು ನಿತ್ಯವಾದ ಸಿಂಹಾಸನಾಧೀಶ್ವರನಾದ ಯೆಹೋವನ ಮಹಿಮೆಯಿಂದ ತುಂಬಿಕೊಂಡಿದ್ದು, ಅಲ್ಲಿ ಅಗ್ನಿರೂಪದೂತರಾದ ಸೆರಾಫಿಯರು (ಯೆಶಾಯ 6:6ನೇವಚನದ ಅಡಿ ಟಿಪ್ಪಣಿ ನೋಡಿರಿ) ಇದ್ದರು. ಅವರಿಗೆ ಆರು ರೆಕ್ಕೆಗಳಿದ್ದು ಎರಡರಿಂದ ತಮ್ಮ ಮುಖವನ್ನು, ಎರಡರಿಂದ ತಮ್ಮ ಕಾಲುಗಳನ್ನು ಮುಚ್ಚಿಕೊಂಡು ಹಾಗೂ ಉಳಿದ ಎರಡು ರೆಕ್ಕೆಗಳನ್ನು ಬಡಿಯುತ್ತಾ ನೆಲ ಸೋಕದೆ ನಿಂತುಕೊಂಡು (ಯೆಶಾಯ 6:2) ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನೆಂದು ಆತನನ್ನು ಸ್ತುತಿಸುತ್ತಿದ್ದರು. ಆ ದೃಶ್ಯದ ಅಗಾಧತೆಯ (Vastness) ಮಹಿಮೆಯನ್ನು ಈ ಲೋಕದ ಯಾರೂಸಹ ವರ್ಣಿಸಲಾಗದು ಹಾಗೂ ಅದಕ್ಕೆ ಸಮವಾಗಲಾರದು. ಆದಾಗ್ಯೂ ಈ ಲೋಕದಲ್ಲಿನ ದೇವದರ್ಶನ ಗುಡಾರ ಹಾಗೂ ಅದರಲ್ಲಿ ನಡೆಯುತ್ತಿದ್ದ ಯಾಜಕಸೇವೆಯು ಪರಲೋಕದಲ್ಲಿರುವ ದೇವದರ್ಶನ ಗುಡಾರಕ್ಕೆ ಸಂಬಂಧಪಟ್ಟಂತ ಅತ್ಯಂತ ಪ್ರಾಮುಖ್ಯವಾದ ಸತ್ಯಗಳು ಹಾಗೂ ಮಾನವನ ವಿಮೋಚನೆಗಾಗಿ ಅಲ್ಲಿ ನಡೆಯುತ್ತಿರುವ ಮಹಾಕಾರ್ಯವನ್ನು ಸೂಚಿಸುತ್ತಿತ್ತು.KanCCh 448.1

    ನಮ್ಮ ರಕ್ಷಕನಾದ ಕ್ರಿಸ್ತನು ಪುನರುತ್ಥಾನಗೊಂಡು ಪರಲೋಕಕ್ಕೆ ಏರಿಹೋದ ಮೇಲೆ, ತನ್ನ ಮಹಾಯಾಜಕ ಸೇವೆಯನ್ನು ಆರಂಭಿಸಬೇಕಾಗಿತ್ತು. ಈ ವಿಷಯವಾಗಿ ಪೌಲನು “ಕ್ರಿಸ್ತನು ನಿಜವಾದ ದೇವಾಲಯಕ್ಕೆ ಅನುರೂಪ ಮಾತ್ರವಾದದ್ದಾಗಿಯೂ, ಕೈಯಿಂದಕಟ್ಟಿದ್ದಾಗಿಯೂ ಇರುವ ಆಲಯದಲ್ಲಿ ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವುದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು (ಇಬ್ರಿಯ 9:24) ಎಂದು ಹೇಳುತ್ತಾನೆ. ಯೇಸುವಿನ ಮಹಾಯಾಜಕಸೇವೆಯು ಎರಡು ಮಹಾವಿಭಾಗಗಳನ್ನು ಒಳಗೊಂಡಿರಬೇಕಾಗಿತ್ತು. ಪ್ರತಿಯೊಂದು ಸೇವೆಯೂ ಒಂದು ನಿರ್ದಿಷ್ಟ ಸಮಯವುಳ್ಳದ್ದಾಗಿರಬೇಕಲ್ಲದೆ, ಪರಲೋಕದ ದೇವದರ್ಶನ ಗುಡಾರದಲ್ಲಿ ಒಂದು ವಿಶಿಷ್ಟವಾದ ಸ್ಥಳದಲ್ಲಿ ನಡೆಯಬೇಕಾಗಿತ್ತು. ಅದೇ ರೀತಿಯಾಗಿ ಈ ಲೋಕದಲ್ಲಿ ಮೋಶೆಕಟ್ಟಿಸಿದ್ದ ದೇವದರ್ಶನ ಗುಡಾರದಲ್ಲಿಯೂ ಸಹ ಪರಿಶುದ್ಧಸ್ಥಳ ಹಾಗೂ ಮಹಾಪರಿಶುದ್ಧಸ್ಥಳ ಎಂಬ ಎರಡು ವಿಭಾಗಗಳನ್ನು ಒಳಗೊಂಡಿತ್ತು. ಪರಿಶುದ್ಧ ಸ್ಥಳದಲ್ಲಿ ದಿನನಿತ್ಯದ ಯಾಜಕಸೇವೆ ಹಾಗೂ ಮಹಾಪರಿಶುದ್ಧ ಸ್ಥಳದಲ್ಲಿ ವರ್ಷಕ್ಕೆ ಒಂದಾವರ್ತಿ ಮಹಾಯಾಜಕನಿಂದ ಮಹಾದೋಷ ಪರಿಹಾರಕ ಸೇವೆಯು ನಡೆಯುತ್ತಿತ್ತು. KanCCh 448.2

    ಯೇಸುಕ್ರಿಸ್ತನು ಪರಲೋಕಕ್ಕೆ ಏರಿಹೋದಾಗ ಪಶ್ಚಾತ್ತಾಪಪಟ್ಟ ತನ್ನ ವಿಶ್ವಾಸಿಗಳ ಪರವಾಗಿ ತನ್ನರಕ್ತದಿಂದ ದೇವರ ಸನ್ನಿಧಾನದಲ್ಲಿ ಹೇಗೆ ಬೇಡಿಕೊಂಡನೋ, ಅದೇ ರೀತಿಯಲ್ಲಿ ಭೂಲೋಕದ ದೇವದರ್ಶನಗುಡಾರದಲ್ಲಿ ಯಾಜಕನು ತನ್ನ ದಿನನಿತ್ಯದ ಸೇವೆಯಲ್ಲಿ ಬಲಿಯಾಗಿ ಅರ್ಪಿಸಲ್ಪಟ್ಟ ಪ್ರಾಣಿಯ ರಕ್ತವನ್ನು ಪರಿಶುದ್ಧ ಸ್ಥಳದಲ್ಲಿದ್ದ ತೆರೆಯಮೇಲೆ ಚಿಮುಕಿಸುತ್ತಿದ್ದನು.KanCCh 448.3

    ಕ್ರಿಸ್ತನ ರಕ್ತವು ಪಶ್ಚಾತ್ತಾಪಗೊಂಡ ಪಾಪಿಯನ್ನು ಅಪರಾಧ ನಿರ್ಣಯದಿಂದ ಬಿಡುಗಡೆಗೊಳಿಸುತ್ತಿತ್ತೇ ಹೊರತು (ರೋಮಾಯ 8:1), ಪಾಪವನ್ನು ರದ್ದುಪಡಿಸುತ್ತಿರಲಿಲ್ಲ. ಅವನ ಪಾಪವು ಅಂತಿಮ ದೋಷ ಪರಿಹಾರವಾಗುವವರೆಗೆ ದೇವದರ್ಶನ ಗುಡಾರದಲ್ಲಿಯೇ ಉಳಿಯುತ್ತಿತ್ತು. ಅದೇರೀತಿಯಲ್ಲಿ ಪಾಪ ಪರಿಹಾರವಾಗಿ ಅರ್ಪಿತವಾಗುತ್ತಿದ್ದ ರಕ್ತವು ಪಶ್ಚಾತ್ತಾಪಪಟ್ಟವರ ಪಾಪವನ್ನು ತೆಗೆದುಹಾಕುತ್ತಿತ್ತು. ಆದರೆ ಮಹಾದೋಷಪರಿಹಾರಕ ದಿನದವರೆಗೆ (ಯಾಜಕಕಾಂಡ 16ನೇ ಅಧ್ಯಾಯ) ದೇವದರ್ಶನ ಗುಡಾರದಲ್ಲಿಯೇ ಉಳಿದಿರುತ್ತಿತ್ತು.KanCCh 449.1

    ದೇವರು ಪ್ರತಿಫಲ ಕೊಡುವ ಆ ಮಹಾದಿನದಲ್ಲಿ “ಸತ್ತವರಿಗೆ .. ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ, ಅವರವರ ಕೃತ್ಯಗಳ ಪ್ರಕಾರ ನ್ಯಾಯ ತೀರ್ಪಾಯಿತು” (ಪ್ರಕಟನೆ 20:12) ಅನಂತರ ಕ್ರಿಸ್ತನ ದೋಷಪರಿಹಾರಕ ರಕ್ತದ ಬಲದಿಂದ ನಿಜವಾಗಿ ಪಶ್ಚಾತ್ತಾಪಪಟ್ಟವರೆಲ್ಲರ ಪಾಪಗಳು ಪರಲೋಕದ ಪುಸ್ತಕಗಳಿಂದ ಅಳಿಸಲ್ಪಡುವವು. ಈ ರೀತಿಯಲ್ಲಿ ದೇವದರ್ಶನ ಗುಡಾರದಲ್ಲಿ ಉಳಿದಿದ್ದ ಪಾಪಗಳು ಅಳಿಸಲ್ಪಟ್ಟು ಅದು ಶುದ್ಧವಾಗುತ್ತಿತ್ತು. ಈ ವಿಧವಾಗಿ ದೋಷಪರಿಹಾರಕ ಮಹಾಕಾರ್ಯ ಅಥವಾ ಪಾಪಗಳ ನಿರ್ಮೂಲವು ಮಹಾದೋಷಪರಿಹಾರಕ ದಿನದಲ್ಲಿ ನಡೆಯುತ್ತಿದ್ದ ಸೇವೆಗಳನ್ನು ಸೂಚಿಸುತ್ತಿದ್ದವು. ಈ ಲೋಕದ ದೇವದರ್ಶನಗುಡಾರವು ಪಾಪದಿಂದ ಕಲುಷಿತಗೊಂಡಿದ್ದು, ಮಹಾಯಾಜಕನು ಆ ದಿನದಲ್ಲಿ ಅರ್ಪಿಸುತ್ತಿದ್ದ ರಕ್ತಬಲಿಯಿಂದ ಪಾಪವೆಲ್ಲವೂ ನಿವಾರಿಸಲ್ಪಟ್ಟು ಶುದ್ಧವಾಗುತ್ತಿತ್ತು.KanCCh 449.2

    ಪರಲೋಕದಲ್ಲಿ ಕ್ರಿಸ್ತನು ನಮ್ಮ ಮಹಾಯಾಜಕನಾಗಿ ಮಾಡುತ್ತಿರುವ ವೆಯನ್ನು ನಾವು ಅರಿತುಕೊಳ್ಳಬಾರದು ಹಾಗೂ ಅದರ ಬಗ್ಗೆ ಗಮನ ನೀಡಬಾರದೆಂಬ ಉದ್ದೇಶದಿಂದ ಸೈತಾನನು ಅಸಂಖ್ಯಾತವಾದ ಮೋಸದ ಯೋಜನೆಗಳನ್ನು ರೂಪಿಸಿ ನಮ್ಮ ಮನಸ್ಸುಗಳು ಅವುಗಳಲ್ಲಿಯೇ ಇರಬೇಕೆಂದು ಬಯಸುತ್ತಾನೆ, ಕ್ರಿಸ್ತನ ಮಹಾದೋಷಪರಿಹಾರಕ ಬಲಿದಾನ ಹಾಗೂ ಆತನ ಮಹಾಯಾಜಕ ಅಥವಾ ಮಧ್ಯಸ್ಥಿಕೆಯ ಸೇವೆಯು ತಿಳಿಸುವ ಮಹಾಸತ್ಯಗಳನ್ನು ಮಹಾಮೋಸಗಾರನಾದ ಸೈತಾನನು ದ್ವೇಷಿಸುತ್ತಾನೆ. KanCCh 449.3

    ಯೇಸುವು ತನ್ನ ಗಾಯಗೊಂಡ ಕೈಗಳಿಂದ ಹಾಗೂ ಜಜ್ಜಿದ ಶರೀರದಿಂದ ನಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಿ “ನನ್ನಕೃಪೆಯೇ ನಿಮಗೆಸಾಕು” ಎಂದು ತನ್ನನ್ನು ಹಿಂಬಾಲಿಸುವವರೆಲ್ಲರಿಗೂ ಹೇಳುತ್ತಾನೆ (2 ಕೊರಿಂಥ 12:9). “ನಾನು ಸಾತ್ವಿಕನೂ, ದೀನಮನಸ್ಸುಳ್ಳವನೂ ಆಗಿರುವುದರಿಂದ ನನ್ನನೊಗವನ್ನು ನಿಮ್ಮಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವುದು. ಯಾಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹೌರವಾದದ್ದು” ಎಂದು ಕ್ರಿಸ್ತನು ನಮಗೆ ಆಹ್ವಾನ ಕೊಡುತ್ತಾನೆ (ಮತ್ತಾಯ 11:29,30). ಆದುದರಿಂದ ಯಾರೂ ಸಹ ತಮ್ಮ ತಪ್ಪುದೋಷಗಳು ಕ್ಷಮಿಸಲ್ಪಡಲಾರವೆಂದು ಎಣಿಸಬಾರದು. ಈ ಲೋಪದೋಷ, ಬಲಹೀನತೆಗಳನ್ನು ಜಯಿಸಲು ದೇವರು ನಂಬಿಕೆ ಮತ್ತು ಕೃಪೆಯನ್ನು ನಮಗೆ ಕೊಡುವನು.KanCCh 449.4

    ಈಗ ನಾವು ಪರಲೋಕದಲ್ಲಿ ನಡೆಯುತ್ತಿರುವ ಮಹಾದೋಷ ಪರಿಹಾರಕ ದಿನದ ಸಮಯದಲ್ಲಿ ಜೀವಿಸುತ್ತಿದ್ದೇವೆ. ಪರಲೋಕದಲ್ಲಿರುವ ದೇವಾಲಯದ ಛಾಯೆಯಾದ ಅಂದರೆ ಪ್ರತಿರೂಪವಾದ ಭೂಲೋಕದ ದೇವದರ್ಶನ ಗುಡಾರದಲ್ಲಿ ಮಹಾಯಾಜಕನು ಮಹಾದೋಷಪರಿಹಾರಕ ದಿನದಲ್ಲಿ ಸಮಸ್ತ ಇಸ್ರಾಯೇಲ್ಯರ ಪಾಪಪರಿಹಾರಕ್ಕಾಗಿ ರಕ್ತಬಲಿ ಅರ್ಪಿಸಿ ದೋಷ ಪರಿಹರಿಸುತ್ತಿದ್ದನು. ಆಗ ಎಲ್ಲಾ ಇಸ್ರಾಯೇಲ್ಯರು ಉಪವಾಸವಿದ್ದು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುತ್ತಾ ದೇವರ ಮುಂದೆ ಕುಗ್ಗಿಹೋದ ಹೃದಯದಿಂದ ಬೇಡಿಕೊಳ್ಳುತ್ತಿದ್ದರು. ಇಲ್ಲದಿದ್ದಲ್ಲಿ ಅವರನ್ನು ಕುಲದಿಂದ ತೆಗೆದುಹಾಕಲಾಗುತ್ತಿತ್ತು. ಅದೇ ರೀತಿಯಲ್ಲಿ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಉಳಿದಿದೆಯೋ, ಅವರು ತಮ್ಮ ಕೃಪಾಕಾಲದ ಉಳಿದ ದಿನಗಳಲ್ಲಿ ತಮ್ಮ ಪಾಪಗಳಿಗಾಗಿ ದುಃಖಪಟ್ಟು ಪಶ್ಚಾತ್ತಾಪದಿಂದ ದೇವರಬಳಿಗೆ ಕುಗ್ಗಿಹೋದ ಮನಸ್ಸಿನಿಂದ ಬಂದು ಬೇಡಿಕೊಳ್ಳಬೇಕು. ಯಥಾರ್ಥವಾಗಿ ಅವರು ತಮ್ಮ ಹೃದಯಗಳನ್ನು ಪರಿಶೋಧಿಸಿಕೊಳ್ಳಬೇಕು. ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ತಮ್ಮ ಲಘುಭಾವನೆ ಹಾಗೂ ಕ್ಷುಲ್ಲಕವಾದ ಕೆಲಸಕ್ಕೆ ಬಾರದ ವಿಷಯಗಳನ್ನು ಬಿಡಬೇಕು. ಕೆಟ್ಟಭಾವನೆಗಳನ್ನು ಬಿಡುವುದಕ್ಕೆ ಮೊದಲು ಅವುಗಳ ಮೇಲೆ ಜಯಹೊಂದಲು ನಾವು ಪ್ರಾಮಾಣಿಕವಾಗಿ ಹೋರಾಟ ಮಾಡಬೇಕು. ಸಿದ್ಧತೆ ಮಾಡಿಕೊಳ್ಳುವ ಕಾರ್ಯವು ಪ್ರತಿಯೊಬ್ಬರಿಗೂ ವೈಯಕ್ತಿಕ ಕಾರ್ಯವಾಗಿದೆ. ನಾವು ಗುಂಪುಗುಂಪಾಗಿ ರಕ್ಷಿಸಲ್ಪಡುವುದಿಲ್ಲ. ಒಬ್ಬನಲ್ಲಿರುವ ಶುದ್ಧತೆ ಮತ್ತು ಭಕ್ತಿಯು ಮತ್ತೊಬ್ಬನಲ್ಲಿ ಕಂಡುಬರದಿರುವ ಈ ಒಳ್ಳೆಯಗುಣಗಳಿಗೆ ಈಡುಕೊಟ್ಟು ಸರಿಪಡಿಸುವುದಿಲ್ಲ. ಎಲ್ಲಾ ಜನಾಂಗದವರೂ ದೇವರ ಮುಂದೆ ನ್ಯಾಯವಿಚಾರಣೆಗೆ ನಿಲ್ಲಬೇಕು. ಆದರೂ ದೇವರು ಪ್ರತಿಯೊಬ್ಬನನ್ನೂ ಈ ಲೋಕದಲ್ಲಿ ಬೇರಾರು ಇಲ್ಲವೇನೋ ಎಂಬಂತೆ ಕೂಲಂಕುಶವಾಗಿ ವಿಚಾರಿಸಿ ಪರೀಕ್ಷಿಸುವನು. ಪ್ರತಿಯೊಬ್ಬರೂ ಪರೀಕ್ಷಿಸಲ್ಪಟ್ಟು, ಅವರಲ್ಲಿ ಸುಕ್ಕು, ಕಳಂಕ ಮೊದಲಾದ ಯಾವುದೇ ದೋಷಗಳು ಇಲ್ಲದಂತೆ ಕಂಡುಬರಬೇಕು. ದೋಷಪರಿಹಾರದ ಅಂತಿಮ ಕಾರ್ಯಕ್ಕೆ ಸಂಬಂಧಪಟ್ಟಂತ ದೃಶ್ಯಗಳು ಬಹಳ ಗಂಭೀರವಾಗಿವೆ. ಇದರಲ್ಲಿ ಮಹತ್ವಪೂರ್ಣವಾದ ಹಾಗೂ ಅತಿಪ್ರಾಮುಖ್ಯವಾದ ವಿಷಯಗಳು ಒಳಗೊಂಡಿವೆ. ಪರಲೋಕದಲ್ಲಿ ಈಗ ನ್ಯಾಯವಿಚಾರಣೆ ಮುಂದುವರಿಯುತ್ತಿದೆ. ಅನೇಕ ವರ್ಷಗಳಿಂದ ಈ ಕಾರ್ಯವು ನಡೆಯುತ್ತಿದೆ. ಬೇಗನೆ (ಆದರೆ ಎಷ್ಟು ಬೇಗನೆ ಎಂದು ಯಾರಿಗೂ ತಿಳಿದಿಲ್ಲ). ಈಗ ಜೀವಿಸುತ್ತಿರುವ ನಮ್ಮ ನ್ಯಾಯವಿಚಾರಣೆಯೂ ಆರಂಭವಾಗಲಿದೆ. ಈ ಮಾತನ್ನು ಶ್ರೀಮತಿ ವೈಟಮ್ಮನವರು ತಿಳಿಸಿ 120ವರ್ಷಗಳ ಮೇಲಾಗಿದೆ. (ಅಂದಮೇಲೆ ನಮ್ಮ ಹಾಗೂ ನಿಮ್ಮ ಹೆಸರು ದೇವರ ಮುಂದೆ ಎಷ್ಟು ಬೇಗನೆ ವಿಚಾರಣೆಗಾಗಿ ಬರುವುದೋ ಯಾರಿಗೂ ತಿಳಿಯದು). ದೇವರ ಘನಗಾಂಭೀರ್ಯವುಳ್ಳ ಸನ್ನಿಧಾನದಲ್ಲಿ ನಮ್ಮೆಲ್ಲರ ಹೆಸರುಗಳು ಪರಿಶೀಲನೆಗಾಗಿ ಬರುತ್ತವೆ. ಈ ಸಮಯದಲ್ಲಿ ಬೇರೆಲ್ಲಕ್ಕಿಂತಲೂ ಹೆಚ್ಚಾಗಿ, ಎಲ್ಲರೂ ಸಹ “ಆ ಕಾಲವು ಯಾವಾಗ ಬರುವುದೋ, ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ” ಎಂಬ ಕ್ರಿಸ್ತನ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡುವುದು ಅನಿವಾರ್ಯವೂ, ಅತ್ಯಗತ್ಯವೂ ಆಗಿದೆ (ಮಾರ್ಕ 13:33). KanCCh 450.1

    ಈಗ ಪರಲೋಕದಲ್ಲಿ ನಡೆಯುತ್ತಿರುವ ನ್ಯಾಯವಿಚಾರಣೆಯು ಮುಕ್ತಾಯಗೊಂಡಾಗ, ಎಲ್ಲರಗತಿಯೂ ಜೀವಕ್ಕಾಗಿ ಅಥವಾ ಮರಣಕ್ಕಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಮೇಘಗಳಲ್ಲಿ ಕರ್ತನು ಬರುವುದಕ್ಕೆ ಸ್ವಲ್ಪಕಾಲ ಮೊದಲು ಕೃಪೆಯಕಾಲವು ಮುಕ್ತಾಯಗೊಳ್ಳುತ್ತದೆ. ಆ ಕಾಲವು ಮುಕ್ತಾಯವಾದಾಗ ಕ್ರಿಸ್ತನು “ಅನ್ಯಾಯಮಾಡುವವನು ಇನ್ನೂ ಅನ್ಯಾಯಮಾಡಲಿ, ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ. ನಾನು ಪ್ರತಿಯೊಬ್ಬನಿಗೂ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿದೆ” (ಪ್ರಕಟನೆ 22:11,12) ಎಂದು ಹೇಳುತ್ತಾನೆ.KanCCh 451.1

    ನೀತಿವಂತರು ಮತ್ತು ದುಷ್ಟರು ಇನ್ನೂ ಸಹ ಈ ಲೋಕದಲ್ಲಿ ಜೀವಿಸುತ್ತಿರುವರು. ಉಣ್ಣುವುದು, ತಿನ್ನುವುದು, ಕುಡಿಯುವುದು, ಮನೆಗಳನ್ನು ಕಟ್ಟುವುದು- ಇವೆಲ್ಲವೂ ನಡೆಯುತ್ತಲೇ ಇರುತ್ತವೆ. ಆದರೆ ಪರಲೋಕದ ದೇವಾಲಯದಲ್ಲಿ ಕ್ರಿಸ್ತನು ತನ್ನ ಮಹಾಯಾಜಕ ಸೇವೆ ಮುಗಿಸಿದ್ದಾನೆ. ಹಾಗೂ ತಮಗೆ ಬರಬೇಕಾದ ಪ್ರತಿಫಲ ಆಗಲೇ ಅಲ್ಲಿ ನಿರ್ಧಾರವಾಗಿದೆ ಎಂಬುದನ್ನು ಜನರು ಅರಿಯುವುದಿಲ್ಲ. ಮಧ್ಯರಾತ್ರಿಯಲ್ಲಿ ಕಳ್ಳನು ಬರುವಂತೆ ಮನುಷ್ಯನ ಗತಿ ನಿರ್ಣಯಿಸುವ ಹಾಗೂ ದುಷ್ಟರಿಂದ ದೇವರ ಕರುಣೆಯು ತೆಗೆಯಲ್ಪಡುವ ದಿನವು ಯಾರಿಗೂ ತಿಳಿಯದಂತೆ ಮೌನವಾಗಿ ಬರಲಿದೆ. KanCCh 451.2

    *****