Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ನಂಬಿಗಸ್ತರಿಗೆ ಪ್ರತಿಫಲ

  ಮೇಘರೂಢನಾಗಿ ಬರಲಿರುವ ಯೇಸುಕ್ರಿಸ್ತನ ಬರೋಣಕ್ಕೆ ನಾವು ಸಿದ್ಧರಾಗಬೇಕೆಂದು ಶ್ರೀಮತಿ ವೈಟಮ್ಮನವರು ಕೇಳಿಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಲೋಕದಮೇಲಣ ಆಸೆಯನ್ನು ನಿಮ್ಮ ಹೃದಯದಿಂದ ತೆಗೆದುಹಾಕಿ. ಕ್ರಿಸ್ತನೊಂದಿಗೆ ಅನ್ಯೋನ್ಯತೆ ಹೊಂದುವುದರ ಅರ್ಥವೇನೆಂದು ನಿಮ್ಮ ಅನುಭವದಿಂದ ತಿಳಿದುಕೊಳ್ಳಿರಿ. ಮುಂದೆ ಬರಲಿರುವ ನ್ಯಾಯತೀರ್ಪಿಗೆ ಸಿದ್ಧರಾಗಿರಿ. ಆಗ ಕ್ರಿಸ್ತನು ಬಂದಾಗ, ಆತನನ್ನು ಸಮಾಧಾನದಿಂದ ಸಂಧಿಸುವವರಲ್ಲಿ ನೀವೂ ಸಹ ಒಬ್ಬರಾಗಿರಬಹುದು. ಆ ದಿನದಲ್ಲಿ ವಿಮೋಚಿಸಲ್ಪಟ್ಟವರು ತಂದೆ ಹಾಗೂ ಮಗನ ಮಹಿಮೆಯಿಂದ ಹೊಳೆಯುವರು. ದೇವದೂತರು ತಮ್ಮ ಬಂಗಾರದ ಕಿನ್ನರಿಗಳನ್ನು ಬಾರಿಸುತ್ತಾ ರಾಜಾಧಿರಾಜನಾದ ಕ್ರಿಸ್ತನನ್ನು ಮತ್ತು ಯಜ್ಞದ ಕುರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರ ಮಾಡಿಕೊಂಡ ಆತನ ವಿಜಯದ ಸಂಕೇತವಾಗಿರುವವರನ್ನು ಸ್ವಾಗತಿಸುತ್ತಾರೆ. ವಿಜಯದಹಾಡನ್ನು ದೇವದೂತರು ಹಾಡುವ ಮೂಲಕ ಅದರ ಮಾಧುರ್ಯವು ಪರಲೋಕದಲ್ಲೆಲ್ಲಾ ಪ್ರತಿಧ್ವನಿಸುವುದು. ಕ್ರಿಸ್ತನು ವಿಜಯಶಾಲಿಯಾದನು. ಆತನ ಶ್ರಮೆ, ಸಂಕಟ ಮರಣ ಹಾಗೂ ಬಲಿದಾನವು ವ್ಯರ್ಥವಾಗಲಿಲ್ಲ. ಕ್ರಿಸ್ತನು ವಿಮೋಚಿಸಲ್ಪಟ್ಟವರೊಂದಿಗೆ ಹೆಬ್ಬಾಗಿಲುಗಳ ಮೂಲಕ ಪರಲೋಕವನ್ನು ಪ್ರವೇಶಿಸುವನು.KanCCh 465.1

  ನಮ್ಮ ಕರ್ತನ ಪುನರುತ್ಥಾನ ಹಾಗೂ ಪರಲೋಕಕ್ಕೆ ಏರಿಹೋದ ಸತ್ಯ ಘಟನೆಗಳು, ಮರಣ ಹಾಗೂ ಸಮಾಧಿಯ ಮೇಲೆ ದೇವರಭಕ್ತರು ಹೊಂದುವ ವಿಜಯದ ಖಚಿತವಾದ ಸಾಕ್ಷ್ಯಾಧಾರವಾಗಿದೆ. ಅಲ್ಲದೆ ಯಜ್ಞದ ಕುರಿಯಾದಾತನ ರಕ್ತದಿಂದ ತಮ್ಮ ಗುಣಸ್ವಭಾವವೆಂಬ ನಿಲುವಂಗಿಗಳನ್ನು ಶುಭ್ರವಾಗಿ ತೊಳೆದುಕೊಂಡಿರುವವರಿಗೆ ಪರಲೋಕವು ತೆರೆದಿರುತ್ತದೆ ಎಂಬುದರ ಸಂಕೇತವಾಗಿದೆ. ಕ್ರಿಸ್ತನು ಮಾನವಕುಲದ ಪ್ರತಿನಿಧಿಯಾಗಿ ಪರಲೋಕಕ್ಕೆ ತಂದೆಯ ಬಳಿಗೆ ಹೋಗಿದ್ದಾನೆ. ಹಾಗೂ ತಂದೆಯಾದದೇವರು ತನ್ನ ಸ್ವರೂಪವನ್ನು ಪ್ರತಿಫಲಿಸುವವರಿಗೆ ತನ್ನ ಹಾಗೂ ಕ್ರಿಸ್ತನ ಮಹಿಮೆಯಿಂದ ಅದರಲ್ಲಿ ಪಾಲುಗಾರರಾಗುವಂತ ಭಾಗ್ಯವನ್ನು ಅನುಗ್ರಹಿಸುತ್ತಾನೆ.KanCCh 465.2

  ಭೂಲೋಕದ ಯಾತ್ರಿಕರಿಗೆ ಪರಲೋಕದಲ್ಲಿ ಭವನಗಳಿವೆ. ನೀತಿವಂತರಿಗೆ ಶುಭ್ರವಾದ ಬಿಳಿನಿಲುವಂಗಿ, ಮಹಿಮೆಯಕಿರೀಟ ಹಾಗೂ ವಿಜಯದ ಸಂಕೇತವಾಗಿ ಖರ್ಜೂರದ ಗರಿಗಳು ಕೊಡಲ್ಪಡುವವು. ಈ ಲೋಕದಲ್ಲಿ ನಾವು ಜೀವನದಲ್ಲಿ ಅನುಭವಿಸಿದ ಎಲ್ಲಾ ಗೊಂದಲ, ಸಮಸ್ಯೆಗಳನ್ನು ದೇವರು ತನ್ನ ಕೃಪೆಯಿಂದ ನಾವು ಅರ್ಥಮಾಡಿಕೊಳ್ಳುವಂತೆ ಮಾಡುವನು. ಇಲ್ಲಿ ತಿಳಿದುಕೊಳ್ಳಲು ಕಠಿಣವಾಗಿದ್ದ ವಿಷಯಗಳು ಪರಲೋಕದಲ್ಲಿ ವಿವರಿಸಲ್ಪಡುವವು. ಕೃಪೆಯ ನಿಗೂಢತೆಯು ನಮ್ಮ ಮುಂದೆ ಸರಳವಾಗಿ ತೋರಿಸಲ್ಪಡುವವು. ಗಲಿಬಿಲಿಗೊಂಡಿದ್ದ ನಮ್ಮ ಮನಸ್ಸುಗಳಿಗೆ ಅತ್ಯಂತ ಪರಿಪೂರ್ಣವಾದ ಹಾಗೂ ಮನೋಹರವಾದ ಸಾಮರಸ್ಯವು ಕಾಣಿಸಲ್ಪಡುವವು. ಅಗಾಧನೂ, ಅಪರಿಮಿತ ಪ್ರೀತಿಸ್ವರೂಪನೂ ಆದ ದೇವರು ನಾವು ಎದುರಿಸಿದ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯ ಅನುಭವವನ್ನು ತಾನೇ ಬರಮಾಡಿದ್ದನೆಂದು ಅಲ್ಲಿ ನಮಗೆ ತಿಳಿದುಬರುವುದು. ಇದಲ್ಲದೆ ತನ್ನನ್ನು ಪ್ರೀತಿಸಿದವರ ಹಿತಕ್ಕಾಗಿ ಎಲ್ಲಾ ಕಾರ್ಯಗಳನ್ನು ಅನುಕೂಲಕರವಾಗಿ ಮಾಡಿದ (ರೋಮಾಯ 8:28) ಕ್ರಿಸ್ತನ ಕೋಮಲವಾದ ಪ್ರೀತಿಯನ್ನು ನಾವು ಮನವರಿಕೆ ಮಾಡಿಕೊಂಡಾಗ, ವರ್ಣಿಸಲಶಕ್ಯವಾದ ಹರ್ಷದಿಂದಲೂ ಹಾಗೂ ಪರಿಪೂರ್ಣವಾದ ಮಹಿಮೆಯಿಂದಲೂ ನಾವು ಆನಂದಿಸುತ್ತೇವೆ.KanCCh 465.3

  ವಿಮೋಚಿಸಲ್ಪಟ್ಟವರಿಗೆ ಪರಲೋಕದಲ್ಲಿ ದುಃಖ, ಗೋಳಾಟ, ನೋವು, ಕಣ್ಣೀರು , ಮರಣವಿರುವುದಿಲ್ಲ. “ಅಲ್ಲಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವುದು” ಯೆಶಾಯ 33:24 ಯುಗಯುಗಾಂತರಗಳವರೆಗೂ ಸಂತೋಷವು ನದಿಯಂತೆ ಹರಿಯುತ್ತಲೇ ಇರುವುದು. KanCCh 466.1

  ನಮ್ಮ ನಿತ್ಯಜೀವದ ನಿರೀಕ್ಷೆಯ ಕೇಂದ್ರವಾಗಿರುವ ಕ್ರಿಸ್ತನನ್ನು ನಾವು ನೋಡುವ ಸಮಯ ಅತಿ ಸಮೀಪವಾಗಿದೆ. ಆತನ ಸನ್ನಿಧಾನದಲ್ಲಿ ನಾವಿರುವಾಗ, ಈ ಲೋಕದಲ್ಲಿ ನಾವನುಭವಿಸಿದ ಕಷ್ಟ ಸಂಕಟಗಳು ಏನೂ ಅನ್ನಿಸುವುದಿಲ್ಲ. “ನಿಮ್ಮ ಧೈರ್ಯವನ್ನು (ಇಂಗ್ಲಿಷ್ ಸತ್ಯವೇದದಲ್ಲಿ ಭರವಸೆ ಎಂದು ಬರೆಯಲ್ಪಟ್ಟಿದೆ) ಬಿಟ್ಟು ಬಿಡಬೇಡಿರಿ; ಅದಕ್ಕೆ ಮಹಾಪ್ರತಿಫಲವುಂಟು. ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು. ಬರುವಾತನು ಇನ್ನೂ ಸ್ವಲ್ಪಕಾಲದಲ್ಲಿ ಬರುವನು, ತಡಮಾಡುವುದಿಲ್ಲ” ಎಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ (ಇಬ್ರಿಯ 10:35- 37). ಮೇಲೆತ್ತಿ ನೋಡಿರಿ; ಕಣ್ಣುಗಳನ್ನು ಮೇಲೆತ್ತಿ ನೋಡಿರಿ, ನಿಮ್ಮ ನಂಬಿಕೆಯು ನಿರಂತರವಾಗಿ ಹೆಚ್ಚಾಗುತ್ತಿರಲಿ. ನಿಮ್ಮ ಈ ದೃಢನಂಬಿಕೆಯು ವಿಮೋಚಿಸಲ್ಪಟ್ಟವರು ಹೊಂದಲಿರುವ ಮಹಾಮಹಿಮೆಯುಳ್ಳ ದೇವರ ಪರಿಶುದ್ಧ ಪಟ್ಟಣಕ್ಕೆ ನಮ್ಮನ್ನು ನಡೆಸುವ ಇಕ್ಕಟ್ಟಾದ ದಾರಿಯಾದ್ಯಂತ ನಮಗೆ ಮಾರ್ಗದರ್ಶನ ನೀಡಲಿ. KanCCh 466.2

  “ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು, ಮುಂಗಾರು ಹಿಂಗಾರುಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು” ಯಾಕೋಬನು (5:7,8). ಈಗ “ದೇವರ ಮಕ್ಕಳಾಗಿದ್ದೇವೆ, ಮುಂದೆ ಏನಾಗುವೆವೋ, ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಕ್ರಿಸ್ತನು ಪ್ರತ್ಯಕ್ಷನಾದರೆ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು” (1 ಯೋಹಾನನು 3:2).KanCCh 466.3

  ಅನಂತರ ಕ್ರಿಸ್ತನು ತನ್ನ ಶ್ರೇಷ್ಠ ಬಲಿದಾನದ ಪ್ರತಿಫಲವನ್ನು ನೋಡುವನು. ಯಾರಿಂದಲೂ ಎಣಿಸಲಾಗದ ಮಹಾಸಮೂಹವು ಕ್ರಿಸ್ತನ ಪ್ರಭಾವದ ಸಮಕ್ಷಮದಲ್ಲಿ ನಿರ್ದೋಷಿಗಳಾಗಿ ಹರ್ಷದೊಡನೆ ನಿಂತಿರುವುದು (ಯೂದನು 1:24). ತನ್ನ ಅಮೂಲ್ಯವಾದ ರಕ್ತದಿಂದ ವಿಮೋಚಿಸಲ್ಪಟ್ಟವರನ್ನು ದೇವರು ನೋಡುವಾಗ “ತನ್ನ ಆತ್ಮವು ಅನುಭವಿಸಿದ ಶ್ರಮೆಯಫಲವನ್ನು ಕಂಡು ತೃಪ್ತನಾಗುವನು” (ಯೆಶಾಯ 53:11).KanCCh 467.1