Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶ್ರೀಮತಿ ವೈಟಮ್ಮನವರ ಬಾಲ್ಯ, ಜೀವನ ಹಾಗೂ ದೈವೀಕ ಸೇವ

    ಎಲೆನ್ ಜಿ ಹರ್ಮೋನ್ ಹಾಗೂ ಆಕೆಯ ಅವಳಿ ಸೋದರಿಯು 1827ನೇ ಇಸವಿ ನವೆಂಬರ್ 16ರಂದು ಅಮೇರಿಕಾ ದೇಶದ ಈಶಾನ್ಯ ಭಾಗದಲ್ಲಿರುವ ಗೋರ್ಹಾಮ್ ಎಂಬ ಊರಿನಲ್ಲಿ ಜನಿಸಿದರು. ಆಕೆಗೆ 9 ವರ್ಷ ವಯಸ್ಸಾಗಿದ್ದಾಗ, ಒಬ್ಬ ತುಂಟ ಹುಡುಗನು ಅವರ ಮುಖಕ್ಕೆ ಕಲ್ಲಿನಿಂದ ಹೊಡೆದನು. ಇದರ ನಿಮಿತ್ತ ಎಲೆನ್‍ಗೆ ಮುಖದಲ್ಲಿ ತೀವ್ರವಾದ ಗಾಯವಾಗಿ ಪ್ರಾಣಾಪಾಯ ಉಂಟಾಯಿತು. ಆದರೆ ಆಕೆ ಬದುಕುಳಿದರೂ ದುರ್ಬಲಳಾದ ಕಾರಣದಿಂದ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲಾಗಲಿಲ್ಲ. 11ನೇ ವಯಸ್ಸಿನಲ್ಲಿ ಎಲೆನ್ ತನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು, 14ನೇ ವಯಸ್ಸಿನಲ್ಲಿ ಮುಳುಗುವ ದೀಕ್ಷಾಸ್ನಾನದ ಮೂಲಕ ಮೆಥೊಡಿಸ್ಟ್ ಸಭೆಯ ಸದಸ್ಯರಾದರು. KanCCh .0

    ಅದೇ ಸಮಯದಲ್ಲಿ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಮೂಲಸ್ಥಾಪಕರಲ್ಲಿ ಒಬ್ಬರಾದ ವಿಲಿಯಂಮಿಲ್ಲರ್‍ರವರು ಫೋರ್ಟ್‍ಲ್ಯಾಂಡ್ ಎಂಬ ಸ್ಥಳದಲ್ಲಿ ಕ್ರಿಸ್ತನು ಶೀಘ್ರವಾಗಿ ಎರಡನೇಸಾರಿ ಈ ಲೋಕಕ್ಕೆ ಬರಲಿದ್ದಾನೆಂಬ ಸುವಾರ್ತೆ ಸಾರುತ್ತಿದ್ದರು. ಆ ಕೂಟದಲ್ಲಿ ಎಲೆನ್‍ಳ ಕುಟುಂಬದವರೆಲ್ಲರೂ ಭಾಗವಹಿಸಿ, ಕ್ರಿಸ್ತನ ಶೀಘ್ರ ಬರೋಣದ ಸಂದೇಶವನ್ನು ಸಂಪೂರ್ಣವಾಗಿ ಅಂಗೀಕರಿಸಿಕೊಂಡರು. 1844ನೇ ಇಸವಿ ಡಿಸೆಂಬರ್‍ ತಿಂಗಳಿನ ಒಂದು ದಿನ ಬೆಳಿಗ್ಗೆ ಎಲೆನ್ ಇತರ ನಾಲ್ಕು ಮಂದಿ ಮಹಿಳೆಯರೊಂದಿಗೆ ಪ್ರಾರ್ಥಿಸುತ್ತಿದ್ದಾಗ, ದೇವರ ಶಕ್ತಿಯು ಆಕೆಯ ಮೇಲೆ ಬಂತು. ಆಗ ಆಕೆಯು ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಕಳೆದುಕೊಂಡರು. ಆಗ ದರ್ಶನದಲ್ಲಿ ಎಲೆನ್ ಕ್ರಿಸ್ತನ ಬರೋಣಕ್ಕಾಗಿ ಎದುರು ನೋಡುತ್ತಿದ್ದವರು ದೇವರ ಪಟ್ಟಣಕ್ಕೆ ಪ್ರಯಾಣ ಮಾಡುತ್ತಿರುವುದನ್ನೂ ಹಾಗೂ ನಂಬಿಗಸ್ತರಿಗೆ ಕೊಡಲ್ಪಡುವ ಪ್ರತಿಫಲವನ್ನು ಸಾಂಕೇತಿಕವಾಗಿ ನೋಡಿದರು. 17 ವರ್ಷದ ಯುವತಿಯಾಗಿದ್ದ ಎಲೆನ್ ಭಯದಿಂದ ನಡುಗುತ್ತಾ ಈ ದರ್ಶನ ಹಾಗೂ ಮುಂದೆ ನೋಡಿದ ದರ್ಶನಗಳನ್ನು ಪೋರ್ಟ್‍ಲ್ಯಾಂಡ್‍ನಲ್ಲಿ ತನ್ನೊಂದಿಗಿದ್ದ ಇತರ ವಿಶ್ವಾಸಿಗಳಿಗೆ ತಿಳಿಸಿದರು. ಅನಂತರ ಅವಕಾಶ ದೊರೆತಾಗ ಅವರು ಮೈಯಿನ್ ಎಂಬಲ್ಲಿಯೂ ಹಾಗೂ ಅದರ ಪಕ್ಕದಲ್ಲಿದ್ದ ಇತರ ರಾಜ್ಯಗಳಲ್ಲಿ ದೇವರ ರಾಜ್ಯಕ್ಕಾಗಿ ಎದುರು ನೋಡುತ್ತಿದ್ದ ಅಡ್ವೆಂಟಿಸ್ಟ್ ಸಭೆಗಳಲ್ಲಿ ತಿಳಿಸಿದರು. 1846ರಲ್ಲಿ ಎಲೆನ್ ಜಿ ಹರ್ಮೋನ್ ಜೇಮ್ಸ್‍ ವೈಟ್ ಎಂಬ ಯೌವನಸ್ಥನಾದ ಅಡ್ವೆಂಟಿಸ್ಟ್‍ ಬೋಧಕರನ್ನು ವಿವಾಹವಾದರು. ಮುಂದಿನ 35 ವರ್ಷಗಳ ಕಾಲ ಅವರು ತಮ್ಮ ಪತಿಯೊಂದಿಗೆ ಕ್ರಿಸ್ತನ ಬರೋಣದ ಸುವಾರ್ತಾ ಸೇವೆಯಲ್ಲಿ ಹುರುಪಿನಿಂದಲೂ, ಶ್ರಮದಿಂದಲೂ ತಮ್ಮನ್ನು ತೊಡಗಿಸಿಕೊಂಡರು. ವೈಟ್ ದಂಪತಿಗಳು ಅಮೇರಿಕಾ ದೇಶದಾದ್ಯಂತ ಪ್ರಯಾಣ ಮಾಡಿ ಸುವಾರ್ತಾಸೇವೆ ಮಾಡಿದರು. ಅಲ್ಲದೆ ಬರವಣಿಗೆ, ಮತ್ತು ಧರ್ಮಬೋಧನೆ, ಸಭೆಗಳ ಆರಂಭ ಹಾಗೂ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯನ್ನು ವ್ಯವಸ್ಥಿತವಾಗಿ 1863 ರಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಿರಿಯರಾದ ಜೇಮ್ಸ್‍ ವೈಟ್‍ರವರು ಆಗಸ್ಟ್ 6, 1881 ರಲ್ಲಿ ಮರಣ ಹೊಂದಿದರು. ಶ್ರೀಮತಿ ಎಲೆನ್ ಜಿ ವೈಟ್ ಹಾಗೂ ಜೇಮ್ಸ್ ವೈಟ್ ದಂಪತಿಗಳು ಮತ್ತು ಅವರ ಇತರ ಸಹ ಕೆಲಸಗಾರರು ವಿವೇಚನೆಯಿಂದ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯನ್ನು ಹೇಗೆ ಒಂದು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದರು ಹಾಗೂ ಅದು ದೇವರ ಕೃಪೆಯಿಂದ ಹೇಗೆ ವಿಶಾಲವಾದ ಬೆಳವಣಿಗೆ ಹೊಂದಿದೆ ಎಂಬುದನ್ನು 21ನೇ ಶತಮಾನದಲ್ಲಿ ಜೀವಿಸುತ್ತಿರುವ ನಾವು ಸಾಕ್ಷ್ಯಾಧಾರವಾಗಿ ನೋಡಬಹುದಾಗಿದೆ. 1849-50ನೇ ಇಸವಿಗಳಲ್ಲಿ ಈ ದಂಪತಿಗಳು ಅಡ್ವೆಂಟಿಸ್ಟ್ ಸಭೆಯ ಪುಸ್ತಕಗಳನ್ನು ಅಚ್ಚು ಹಾಕಿಸುವುದಕ್ಕೂ ಹಾಗೂ ಪ್ರಕಟಿಸುವುದಕ್ಕಾಗಿ ಒಂದು ಪ್ರಕಟನಾಸಂಸ್ಥೆ ಸ್ಥಾಪಿಸಿದರು. ಅನಂತರ 1850ರ ವರ್ಷಗಳಲ್ಲಿ ಉತ್ತಮ ಹಣಕಾಸಿನ ವ್ಯವಸ್ಥೆಯಿಂದ ಏಳನೇ ದಿನದ ಸಬ್ಬತ್ತನ್ನು ಕೈಕೊಂಡು ನಡೆಯುವ ಅಡ್ವೆಂಟಿಸ್ಟ್ ಸಭೆ ಸ್ಥಾಪನೆಗೆ ತಳಹದಿ ಹಾಕಿದರು. ಇದರ ನಿಮಿತ್ತವಾಗಿ 1863ನೇ ಇಸವಿಯಲ್ಲಿ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಅಧಿಕೃತವಾಗಿ ಆರಂಭವಾಯಿತು. 1866 ರಲ್ಲಿ ವೈದ್ಯಕೀಯ ಸೇವೆ ಮತ್ತು 1870 ರ ಅವಧಿಯಲ್ಲಿ ಶಾಲೆಗಳು ಆರಂಭವಾದವು. ವರ್ಷಕ್ಕೊಂದು ಸಾರಿ ನಡೆಯುವ ಸುವಾರ್ತಾ ಸೇವೆಯ ಕ್ಯಾಂಪ್ 1868 ರಲ್ಲಿ ಪ್ರಾರಂಭಿಸಲ್ಪಟ್ಟಿತು. 1874ನೇ ಇಸವಿಯಲ್ಲಿ ಮೊದಲ ಬಾರಿಗೆ ಜಾನ್‍ ಆಂಡ್ರ್ಯೂಸ್‍ರವರನ್ನು ಸ್ವಿಜರ್‍ಲ್ಯಾಂಡ್ ದೇಶಕ್ಕೆ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಬೋಧಕರಾಗಿ ಕಳುಹಿಸಲಾಯಿತು. ಇವೆಲ್ಲಾ ಬೆಳವಣಿಗೆಗಳಿಗೆ ದೇವರು ಶ್ರೀಮತಿ ವೈಟಮ್ಮನವರ ಮೂಲಕ ಮಾರ್ಗದರ್ಶನ ನೀಡಿದನು. KanCCh .0

    ಶ್ರೀಮತಿ ವೈಟಮ್ಮನವರಿಗೆ ದೇವರು ಆರಂಭದಲ್ಲಿ ದರ್ಶನದ ಮೂಲಕ ನೀಡಿದ ಸಂದೇಶಗಳನ್ನು ಅವರು ವೈಯಕ್ತಿಕವಾಗಿ ಇತರರಿಗೆ ಪತ್ರದ ಮೂಲಕ ಅಥವಾ ನಮ್ಮ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ನಿಯಮಿತವಾಗಿ ಮೊದಲು ಆರಂಭಿಸಿದ “ಪ್ರಸೆಂಟ್ ಟ್ರೂತ್’ ಎಂಬ ಪುಸ್ತಕದಲ್ಲಿ ಪ್ರಕಟಿಸಲಾಯಿತು. 1851 ನೇ ಇಸವಿಯಲ್ಲಿ ಮೊದಲ ಬಾರಿಗೆ ಅವರು `ಎ ಸ್ಕೆಚ್ ಆಫ್ ಕ್ರಿಶ್ಚಿಯನ್ ಎಕ್ಸ್ ಪೀರಿಯನ್ಸ್ ಅಂಡ್ ವ್ಯೂವ್ಸ್ ಆಫ್ ಎಲೆನ್ ಜಿ ವೈಟ್’ ಎಂಬ 64 ಪುಟಗಳ ಚಿಕ್ಕ ಪುಸ್ತಕದಲ್ಲಿ ಮುದ್ರಿಸಲಾಯಿತು. KanCCh .0

    1855ನೇ ಇಸವಿಯಿಂದ `ಟೆಸ್ಟಿಮೊನಿ ಫಾರ್ ದಿ ಚರ್ಚ್’ ಎಂಬ ಹೆಸರಿನಲ್ಲಿ ಶ್ರೀಮತಿ ವೈಟಮ್ಮನವರು ಅನೇಕ ಕರಪತ್ರಗಳನ್ನು ಪ್ರಕಟಿಸಿದರು. ಇವುಗಳು ಕಾಲದಿಂದ ಕಾಲಕ್ಕೆ ದೇವರು ತನ್ನ ಜನರಿಗೆ ನೀಡಿದ ಎಚ್ಚರಿಕೆ, ಸಲಹೆಗಳನ್ನು ಒಳಗೊಂಡ ಸಂದೇಶಗಳಾಗಿದ್ದವು. ಇಂತಹ 30 ಕರಪತ್ರಗಳ ಸಂದೇಶವನ್ನು ನಾಲ್ಕು ಪುಸ್ತಕಗಳಲ್ಲಿ 1885 ರಲ್ಲಿ ಮರುಮುದ್ರಣ ಮಾಡಲಾಯಿತು. 1889-1909 ರ ನಡುವಣ ಅವಧಿಯಲ್ಲಿ ಶ್ರೀಮತಿ ವೈಟಮ್ಮನವರು ಬರೆದ ಬರಹಗಳನ್ನು ಒಟ್ಟುಗೂಡಿಸಿ 9 ಸಂಪುಟಗಳಲ್ಲಿ “ಟೆಸ್ಟಿಮೊನೀಸ್ ಫಾರ್ ದಿ ಚರ್ಚ್” ಎಂದು ಪ್ರಕಟಿಸಲಾಗಿದೆ. KanCCh .0

    ಶ್ರೀಮತಿ ಎಲೆನ್‍ವೈಟ್ ಹಾಗೂ ಜೇಮ್ಸ್‍ದಂಪತಿಗೆ ಹೆನ್ರಿ, ಎಡ್ಸನ್, ವಿಲಿಯಮ್ ಹಾಗೂ ಹರ್ಬರ್ಟ್ ಎಂಬ ನಾಲ್ಕು ಗಂಡು ಮಕ್ಕಳು ಜನಿಸಿದರು. ಅವರಲ್ಲಿ ಮೊದಲನೆಯವನಾದ ಹೆನ್ರಿ 16ನೇ ವಯಸ್ಸಿನಲ್ಲಿ ಹಾಗೂ ಕಿರಿಯವನಾದ ಹರ್ಬರ್ಟ್ ಕೇವಲ 3 ತಿಂಗಳ ಮಗುವಾಗಿದ್ದಾಗ ಮರಣ ಹೊಂದಿದರು. ಉಳಿದ ಇಬ್ಬರು ಮಕ್ಕಳಾದ ಎಡ್ಸನ್ ಹಾಗೂ ವಿಲಿಯಮ್ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಕಾರ್ಯದಲ್ಲಿ ಬಹಳ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.KanCCh .0

    ಶ್ರೀಮತಿ ವೈಟಮ್ಮನವರು ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಮುಖ್ಯ ಕಚೇರಿಯಾದ ಜನರಲ್ ಕಾನ್‍ಫರೆನ್ಸ್ ಅಧಿಕಾರಿಗಳ ಕೋರಿಕೆಯಂತೆ ಯೂರೋಪ್ ಖಂಡಕ್ಕೆ ಹೋದರು. ಸ್ವಿಜರ್‍ಲ್ಯಾಂಡ್ ದೇಶದ ಬಾಸೆಲ್ ನಗರದಲ್ಲಿ ಎರಡು ವರ್ಷಗಳ ಕಾಲ ವಾಸವಾಗಿದ್ದ ಅವರು ಯೂರೋಪಿನಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿ ಸಭೆಗಳಲ್ಲಿ ಸಂದೇಶ ನೀಡಿ ಅವುಗಳನ್ನು ಬಲಪಡಿಸಿದರು. KanCCh .0

    ಯೂರೋಪಿನಿಂದ ಅಮೇರಿಕಾ ದೇಶಕ್ಕೆ ಹಿಂದಿರುಗಿ ಬಂದು ನಾಲ್ಕು ವರ್ಷಗಳ ನಂತರ ತಮ್ಮ 63ನೇ ವಯಸ್ಸಿನಲ್ಲಿ ಶ್ರೀಮತಿ ವೈಟಮ್ಮನವರು ಜನರಲ್ ಕಾನ್‍ಫರೆನ್ಸ್ ಕಚೇರಿಯ ಕೋರಿಕೆಯಂತೆ ಆಸ್ಟ್ರೇಲಿಯಾ ದೇಶಕ್ಕೆ ಹೋದರು. ಅಲ್ಲಿ ಅವರು 9 ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲಾ ಕಾಲೇಜುಗಳು ಮತ್ತು ವೈದ್ಯಕೀಯ ಸೇವೆಯ ಆರಂಭ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 1900ರಲ್ಲಿ ಹಿಂದಿರುಗಿ ಅಮೇರಿಕಾಕ್ಕೆ ಬಂದ ಅವರು ಕ್ಯಾಲಿಫೋರ್ನಿಯಾ ರಾಜ್ಯದ ಸೈಂಟ್‍ ಹೆಲೆನಾ ಎಂಬಲ್ಲಿ ವಾಸಿಸಿ 1915ರಲ್ಲಿ ನಿಧನರಾದರು. KanCCh .0

    ಶ್ರೀಮತಿ ವೈಟಮ್ಮನವರು ಅಮೇರಿಕಾದಲ್ಲಿ 60 ವರ್ಷ ಮತ್ತು ಯೂರೋಪ್ ಆಸ್ಟ್ರೇಲಿಯಾ ಖಂಡಗಳಲ್ಲಿ 10 ವರ್ಷ - ಹೀಗೆ ಒಟ್ಟು 70 ವರ್ಷಗಳು ಸುದೀರ್ಘ ಸೇವೆ ಮಾಡಿದರು. ಈ ಅವಧಿಯಲ್ಲಿ ಅವರಿಗೆ ಸುಮಾರು ಎರಡು ಸಾವಿರ ದೇವದರ್ಶನಗಳಾದವು. ಇವುಗಳ ಮೂಲಕ ಅವರು ವ್ಯಕ್ತಿಗಳಿಗೆ, ಸಭೆಗಳಿಗೆ, ಸಾರ್ವಜನಿಕ ಕೂಟಗಳು ಮತ್ತು ಜನರಲ್ ಕಾನ್‍ಫರೆನ್ಸ್ ಅಧಿವೇಶನಗಳಲ್ಲಿ ಮಾರ್ಗದರ್ಶನ ನೀಡಿ ಪ್ರವಾದನೆಯಿಂದ ಪ್ರೇರಿತವಾದ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆ ಎಂಬ ಈ ಮಹಾಚಳುವಳಿಯನ್ನು ರೂಪಿಸಿ ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ದರ್ಶನಗಳ ಮೂಲಕ ದೇವರು ನೀಡಿದ ಸಂದೇಶಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿದಾಗ, ಹೆಚ್ಚು ಕಡಿಮೆ ಒಂದು ಲಕ್ಷ ಪುಟಗಳಷ್ಟಾಗಿವೆ. ದೇವರು ಅವರಿಗೆ ದರ್ಶನಗಳ ಮೂಲಕ ಕೊಟ್ಟ ಸಂದೇಶಗಳನ್ನು ಶ್ರೀಮತಿ ವೈಟಮ್ಮನವರು ಜನರಿಗೆ ಪತ್ರಗಳ ಮೂಲಕ, ಅಡ್ವೆಂಟಿಸ್ಟ್ ಸಭೆಯ ಪತ್ರಿಕೆಗಳು ಹಾಗೂ ಪುಸ್ತಕಗಳ ಮೂಲಕ ಓದುಗರನ್ನು ಮುಟ್ಟಿದವು. ಸತ್ಯವೇದದ ಇತಿಹಾಸ, ದಿನನಿತ್ಯದ ಕ್ರೈಸ್ತ ಅನುಭವ, ಆರೋಗ್ಯ, ಶಿಕ್ಷಣ, ಸುವಾರ್ತಾ ಸೇವೆ ಹಾಗೂ ಇನ್ನಿತರ ಪ್ರಾಯೋಗಿಕವಾದ ವಿಷಯಗಳ ಬಗ್ಗೆ ಅವರ ಸಂದೇಶಗಳು ಸಂಬಂಧಿಸಿವೆ. ಶ್ರೀಮತಿ ವೈಟಮ್ಮನವರ ಅನೇಕ ಪುಸ್ತಕಗಳು ಜಗತ್ತಿನ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದ್ದು, ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಸ್ಟೆಪ್ಸ್ ಟು ಕ್ರೈಸ್ಟ್ ಎಂಬ ಅವರ ಪುಸ್ತಕವು 127 ಭಾಷೆಗಳಿಗೆ ಅನುವಾದಗೊಂಡಿದ್ದು, 1892-1990 ರ ನಡುವಣ ಅವಧಿಯಲ್ಲಿ ಸುಮಾರು ಐದು ಕೋಟಿಗಳಷ್ಟು ಮಾರಾಟವಾಗಿದೆ. KanCCh .0

    ಶ್ರೀಮತಿ ವೈಟಮ್ಮನವರಿಗೆ 81 ವರ್ಷ ವಯಸ್ಸಾದಾಗ ಕೊನೆಯ ಬಾರಿಗೆ ಅಮೇರಿಕಾ ಖಂಡವನ್ನು ದಾಟಿ 1909 ರಲ್ಲಿ ನಡೆದ ಜನರಲ್ ಕಾನ್‍ಫರೆನ್ಸ್ ಅಧಿವೇಶನದಲ್ಲಿ ಭಾಗವಹಿಸಿದರು. 1915 ರಲ್ಲಿ ಅವರು ಮರಣ ಹೊಂದುವವರೆಗೆ ಉಳಿದ ಆರು ವರ್ಷಗಳನ್ನು ಪುಸ್ತಕಗಳನ್ನು ಬರೆಯುವುದರಲ್ಲಿ ಕಳೆದರು. ಅವರು ಮರಣ ಹೊಂದುವುದಕ್ಕೆ ಕೆಲವು ತಿಂಗಳ ಮೊದಲು “ನಾನು ಬದುಕುವೆನೋ ಅಥವಾ ಸಾಯುವೆನೋ, ನನ್ನ ಬರವಣಿಗೆಯು ನಿಮ್ಮೊಂದಿಗೆ ಮಾತಾಡುತ್ತಲೇ ಇರುತ್ತವೆ; ಹಾಗೂ ಈ ಲೋಕದ ಅಂತ್ಯದವರೆಗೂ ಅವುಗಳ ಉದ್ದೇಶ ಮುಂದುವರಿಯುತ್ತಿರುತ್ತದೆ” ಎಂದು ಬರೆದರು. KanCCh .0

    ಶ್ರೀಮತಿ ವೈಟಮ್ಮನವರು ಅಡ್ವೆಂಟಿಸ್ಟ್‍ಸಭೆಯಲ್ಲಿ ಯಾವುದೇ ಅಧಿಕಾರ ಸ್ಥಾನ ಹೊಂದಿರಲಿಲ್ಲ. ಆದರೂ ಅವರ ಸಹೋದ್ಯೋಗಿಗಳು, ಅವರ ಕುಟುಂಬದ ಸದಸ್ಯರು ಮತ್ತು ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಅವರಿಗೆ ಬಹಳ ಗೌರವ ನೀಡಿವೆ. ಅವರು ಮಕ್ಕಳಿಗಾಗಿ ಶ್ರಮಿಸಿದ ತಾಯಿಯೂ ಮತ್ತು ಶ್ರದ್ಧೆಯಿಂದ ದಣಿವರಿಯದ ಧಾರ್ಮಿಕ ವ್ಯಕ್ತಿಯೂ ಆಗಿದ್ದರು. ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಶ್ರೀಮತಿ ವೈಟಮ್ಮನವರನ್ನು ದೇವರು ತನ್ನ ಜನರಿಗೆ ಸಂದೇಶ ನೀಡಲು ಆರಿಸಿಕೊಂಡ “ಸಂದೇಶಕರು” ಎಂದು ಎಣಿಸುತ್ತದೆ. ಇತರರು ತನ್ನನ್ನು ಅನುಸರಿಸಬೇಕೆಂದು ಅವರೂ ಎಂದೂ ಹೇಳಲಿಲ್ಲ; ಅಥವಾ ತಮಗೆ ಕೊಟ್ಟ ಪ್ರವಾದನಾ ವರವನ್ನು ಹಣಸಂಪಾದಿಸಲಿಕ್ಕೆ ಅಥವಾ ಜನಪ್ರಿಯತೆ ಗಳಿಸಿಕೊಳ್ಳುವುದಕ್ಕಾಗಲಿ ಉಪಯೋಗಿಸಿಕೊಳ್ಳಲಿಲ್ಲ. ತಮ್ಮ ಜೀವನ ಹಾಗೂ ತಮ್ಮ ಎಲ್ಲಾ ಸಂಪನ್ಮೂಲಗಳನ್ನು ಶ್ರೀಮತಿ ವೈಟಮ್ಮನವರು ದೇವರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. KanCCh .0

    1915ನೇ ಇಸವಿ ಆಗಸ್ಟ್ 23 ರಂದು ಶ್ರೀಮತಿ ವೈಟಮ್ಮನವರು ಮರಣ ಹೊಂದಿದರು. ಆಗ ಅಮೇರಿಕಾ ದೇಶದ ಜನಪ್ರಿಯ ವಾರಪತ್ರಿಕೆಯಾಗಿದ್ದ “ದಿ ಇಂಡಿಪೆಂಡೆಂಟ್” ನಲ್ಲಿ ಸಂಪಾದಕರು ಕೆಳಕಂಡಂತೆ ಲೇಖನ ಬರೆದು ತಮ್ಮ ಶ್ರದ್ಧಾಂಜಲಿ ಅರ್ಪಿಸಿದರು : KanCCh .0

    ಶ್ರೀಮತಿ ವೈಟಮ್ಮನವರು ತಮ್ಮ ನಂಬಿಕೆ ಹಾಗೂ ದರ್ಶನಗಳ ಬಗ್ಗೆ ಬಹಳ ಪ್ರಾಮಾಣಿಕರಾಗಿದ್ದರು. ಅವರ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ದೃಢನಂಬಿಕೆ ಎದ್ದು ಕಾಣುತ್ತಿತ್ತು. ತಾವು ದೇವರಿಂದ ದರ್ಶನ ಹೊಂದಿದವರು ಹಾಗೂ ದೇವರಿಂದ ಆರಿಸಲ್ಪಟ್ಟ ಸಂದೇಶಕರು ಎಂಬ ಯಾವುದೇ ಅಹಂಕಾರ ಅವರಲ್ಲಿರಲಿಲ್ಲ. ಹಣ ಸಂಪಾದಿಸಬೇಕೆಂಬ ದುರಾಸೆ ಅವರಲ್ಲಿ ಎಂದೂ ಕಂಡುಬರಲಿಲ್ಲ. ಅವರ ಜೀವನ ಹಾಗೂ ದೈವೀಕ ಸೇವೆಯು ಪ್ರವಾದಿನಿಯ ಅರ್ಹತೆಗೆ ತಕ್ಕಂತೆ ಇತ್ತು“. KanCCh .0

    ಶ್ರೀಮತಿ ವೈಟಮ್ಮನವರು ಮರಣಹೊಂದುವುದಕ್ಕೆ ಕೆಲವು ವರ್ಷಗಳ ಮೊದಲು ಅಡ್ವೆಂಟಿಸ್ಟ್‍ ಸಭೆಯ ಅಧಿಕಾರಿಗಳು ಹಾಗೂ ನಾಯಕರುಗಳನ್ನು ಒಳಗೊಂಡಂತೆ ಒಂದು ಆಡಳಿತ ಮಂಡಳಿಯನ್ನು ರಚಿಸಿದರು. ತಮ್ಮೆಲ್ಲಾ ಪುಸ್ತಕಗಳು ಹಾಗೂ ಬರಹಗಳನ್ನು ಆ ಮಂಡಳಿಯ ಅಧೀನಕ್ಕೆ ಒಪ್ಪಿಸಿ, ಅವುಗಳನ್ನು ಜತನದಿಂದ ಕಾಪಾಡಿಕೊಂಡು ಬರುವಂತೆಯೂ ಮತ್ತು ಇತರ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವಂತೆಯೂ ಸಲಹೆ ನೀಡಿದರು. ಅಡ್ವೆಂಟಿಸ್ಟ್ ಸಭೆಯ ಜಾಗತಿಕ ಮುಖ್ಯ ಕಚೇರಿಯಾದ ಜನರಲ್‍ ಕಾನ್‍ಫರೆನ್ಸ್ ಇದರ ಹೊಣೆ ಹೊತ್ತುಕೊಂಡು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಿಸುತ್ತಿದೆ. ಮಾತ್ರವಲ್ಲದೆ ಶ್ರೀಮತಿ ವೈಟಮ್ಮನವರ ಪುಸ್ತಕಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಜಗತ್ತಿನ ಇತರ ಭಾಷೆಗಳಿಗೆ ಅನುವಾದ ಮಾಡಿಸಿ, ಅದನ್ನು ಪ್ರಕಟಿಸಲು ಉತ್ತೇಜನ ನೀಡುತ್ತಿದೆ. ಈ ಆಡಳಿತ ಮಂಡಳಿಯ ಅಪ್ಪಣೆಯಂತೆ ಕ್ರೈಸ್ತ ಸಭೆಗೆ ಹಿತವಚನಗಳು ಎಂಬ ಈ ಕನ್ನಡ ಪುಸ್ತಕವು ನಿಮ್ಮ ಕೈಯಲ್ಲಿದೆ. KanCCh .0

    *********