Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರವಾದಿಗೆ ಹೇಗೆ ದೈವೀಕ ಬೆಳಕು ಬಂದಿತು?

    ಇಸ್ರಾಯೇಲ್ಯರ ಅನುಭವದಿಂದ ದೇವರು ಅವರೊಂದಿಗೆ ಹೇಗೆ ಪ್ರವಾದಿಗಳ ಮೂಲಕ ಮಾತಾಡುತ್ತಾನೆಂದು ನಾವು ಈಗಾಗಲೇ ನೋಡಿದ್ದೇವೆ “ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು, ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು” ಎಂದು ಕರ್ತನಾದ ದೇವರು ಹೇಳಿದ್ದಾರೆ (ಅರಣ್ಯಕಾಂಡ 12:6). KanCCh .0

    1858ನೇ ಇಸವಿಯಲ್ಲಿ ಶ್ರೀಮತಿ ವೈಟಮ್ಮನವರು ಕ್ರಿಸ್ತನು ಮತ್ತು ಸೈತಾನನ ಮಧ್ಯೆ ನಡೆಯುವ ಮಹಾಹೋರಾಟದ ಬಗ್ಗೆ ಮೊದಲ ದೇವದರ್ಶನ ಕಂಡಾಗ ಅವರಲ್ಲಾದ ಕೆಲವು ನಿರ್ದಿಷ್ಟವಾದ ಶಾರೀರಿಕ ಬದಲಾವಣೆಗಳ ಬಗ್ಗೆ ನಾವು ಈಗಾಗಲೇ ತಿಳಿಸಿದ್ದೇವೆ. ದರ್ಶನಗಳು ಯಾಕೆ ಈ ರೀತಿ ಕೊಡಲ್ಪಟ್ಟವೆಂದು ಯಾರಾದರೂ ತರ್ಕಬದ್ಧವಾಗಿ ಪ್ರಶ್ನಿಸಬಹುದು. ದೇವರು ನಿಜವಾಗಿಯೂ ತನ್ನ ಪ್ರವಾದಿಯೊಂದಿಗೆ ಮಾತಾಡುತ್ತಿದ್ದಾನೆಂದು ಜನರಲ್ಲಿ ಭರವಸೆ ಉಂಟು ಮಾಡುವುದಕ್ಕಾಗಿ ಈ ರೀತಿ ದರ್ಶನಗಳು ಕೊಡಲ್ಪಟ್ಟಿವೆ ಎಂಬುದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಶ್ರೀಮತಿ ವೈಟಮ್ಮನವರು ಹೆಚ್ಚಾಗಿ ತಿಳಿಸಿಲ್ಲ. ಆದರೆ ಒಂದು ಸಂದರ್ಭದಲ್ಲಿ ಅವರು “ಕೊನೆಯ ಕಾಲದಲ್ಲಿ ಪ್ರವಾದನಾ ಆತ್ಮದಲ್ಲಿ ಜನರು ಭರವಸೆ ಇಡಬೇಕೆಂಬ ಉದ್ದೇಶದಿಂದಲೂ ಹಾಗೂ ಅವರ ನಂಬಿಕೆಯನ್ನು ದೃಢಪಡಿಸುವುದಕ್ಕಾಗಿಯೂ ಈ ಸಂದೇಶಗಳು ನನಗೆ ಕೊಡಲ್ಪಟ್ಟವು” ಎಂದು ಹೇಳಿದ್ದಾರೆ. KanCCh .0

    ಶ್ರೀಮತಿ ವೈಟಮ್ಮನವರ ಪ್ರವಾದನಾ ಆತ್ಮದ ಪ್ರೇರಣೆಯನ್ನು ಅದರ ಫಲಿತಾಂಶಗಳಿಂದ ಪರೀಕ್ಷಿಸಬೇಕು... “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ” ಎಂದು ಸತ್ಯವೇದವು ತಿಳಿಸುತ್ತದೆ (ಮತ್ತಾಯ 7:16). ಆದರೆ ಫಲವು ಕಂಡುಬರಲಿಕ್ಕೆ ಸಮಯ ಹಿಡಿಯುತ್ತದೆ. ಕರ್ತನಾದ ದೇವರು ಜನರು ನೋಡಿ ನಂಬಲು ಸಹಾಯವಾಗುವಂತೆ ದರ್ಶನಗಳಿಗೆ ಸಂಬಂಧಪಟ್ಟಂತೆ ಆರಂಭದಲ್ಲಿಯೇ ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದಾನೆ. KanCCh .0

    ಆದರೆ ದೇವರಿಂದ ಬರುವ ಎಲ್ಲಾ ದರ್ಶನಗಳೂ ಶಾರೀರಿಕ ಬದಲಾವಣೆಗಳನ್ನು ಒಳಗೊಂಡಂತೆ ಸಾರ್ವಜನಿಕವಾಗಿ ಕೊಡಲ್ಪಟ್ಟಿಲ್ಲ. ಕನಸುಗಳ ಮೂಲಕವಾಗಿಯೂ ಪ್ರವಾದಿಗಳೊಂದಿಗೆ ಮಾತಾಡುವೆನೆಂದು ದೇವರು ವಾಗ್ದಾನ ಮಾಡಿದ್ದಾನೆ (ಅರಣ್ಯಕಾಂಡ 12:6). ಇವು ದಾನಿಯೇಲನು ಕಂಡಂತೆ ಪ್ರವಾದನೆಗೆ ಸಂಬಂಧಪಟ್ಟ ಕನಸುಗಳಾಗಿವೆ. “ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಿಗೆ ಹಾಸಿಗೆಯ ಮೇಲೆ ಸ್ವಪ್ನವಾಯಿತು. ಅವನ ಮನಸ್ಸಿನಲ್ಲಿ ಕನಸು ಬಿತ್ತು. ಕೂಡಲೇ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದನು” ಎಂದು ಪ್ರವಾದಿಯಾದ ದಾನಿಯೇಲನು ತಿಳಿಸುತ್ತಾನೆ (7:1). ಅನೇಕ ಸಂದರ್ಭಗಳಲ್ಲಿ ದಾನಿಯೇಲನು ತನಗೆ ಪ್ರಕಟವಾದದ್ದನ್ನು ಹೇಳುವಾಗ “ರಾತ್ರಿಯಲ್ಲಿ ನನಗೆ ದೇವದರ್ಶನವಾಯಿತು” ಎಂದು ಬರೆದಿದ್ದಾನೆ. ಅದೇ ರೀತಿ ಶ್ರೀಮತಿ ವೈಟಮ್ಮನವರಿಗೂ ಸಹ ಅವರು ರಾತ್ರಿ ಮಲಗಿದ್ದಾಗ, ಮನಸ್ಸು ವಿಶ್ರಾಂತಿಯಲ್ಲಿರುವಾಗ ದೇವದರ್ಶನದ ಅನುಭವಗಳಾಗಿವೆ. ಅವರು ಬರೆದ ಲೇಖನಗಳ ಮುನ್ನುಡಿಯಲ್ಲಿ “ರಾತ್ರಿ ದೇವದರ್ಶನದಲ್ಲಿ ಕೆಲವು ವಿಷಯಗಳು ನನಗೆ ಸ್ಪಷ್ಟವಾಗಿ ತಿಳಿಸಲ್ಪಟ್ಟವು” ಎಂದು ತಿಳಿಸಿದ್ದಾರೆ. ದೇವರು ಪ್ರವಾದಿಗಳೊಂದಿಗೆ ಹೆಚ್ಚಾಗಿ ಪ್ರವಾದನಾತ್ಮಕ ಕನಸುಗಳ ಮೂಲಕ ಮಾತಾಡಿದ್ದಾನೆ. ಪ್ರವಾದನೆಗೆ ಸಂಬಂಧಪಟ್ಟಂತ ಕನಸು ಅಥವಾ ದೇವದರ್ಶನ ಮತ್ತು ಸಹಜವಾಗಿ ಎಲ್ಲರಿಗೂ ಬೀಳುವ ಕನಸುಗಳ ನಡುವಣ ಸಂದರ್ಭಗಳ ಬಗ್ಗೆ ಅನೇಕರಿಗೆ ಪ್ರಶ್ನೆಗಳು ಬರಬಹುದು. ಈ ವಿಷಯದ ಬಗ್ಗೆ ಶ್ರೀಮತಿ ವೈಟಮ್ಮನವರು 1868ನೇ ಇಸವಿಯಲ್ಲಿ ಹೀಗೆ ತಿಳಿಸಿದ್ದಾರೆ : KanCCh .0

    “ನಮ್ಮ ಜೀವನದಲ್ಲಿ ಸಾಧಾರಣ ವಿಷಯಗಳ ಬಗ್ಗೆ ಸಹಜವಾಗಿ ಕನಸುಗಳು ಬೀಳುತ್ತವೆ. ಅದಕ್ಕೂ ದೇವರಾತ್ಮನಿಗೂ ಯಾವುದೇ ಸಂಬಂಧವಿಲ್ಲ. ಸೈತಾನನಿಂದ ಪ್ರೇರಿತವಾದಂತ ಸುಳ್ಳು ಕನಸುಗಳು ಹಾಗೂ ಸುಳ್ಳು ದರ್ಶನಗಳೂ ಇವೆ. ಆದರೆ ದೇವರಿಂದ ಬರುವ ಕನಸುಗಳು ದೇವದರ್ಶನದೊಂದಿಗೆ ದೇವರ ವಾಕ್ಯದಲ್ಲಿ ವರ್ಗೀಕರಿಸಲ್ಪಟ್ಟಿರುತ್ತವೆ (Classed). ಇಂತಹ ಕನಸುಗಳು ಯಾರಿಗೆ, ಯಾವ ಸನ್ನಿವೇಶದಲ್ಲಿ ಕೊಡಲ್ಪಟ್ಟಿವೆ ಎಂಬುದನ್ನು ಪರಿಗಣಿಸುವಾಗ ಅವುಗಳು ಯಥಾರ್ಥವಾದವುಗಳೋ, ಇಲ್ಲವೋ ಎಂಬುದಕ್ಕೆ ಸಾಕ್ಷ್ಯಾಧಾರಗಳು ಅವುಗಳಲ್ಲಿಯೇ ಇರುತ್ತವೆ“.KanCCh .0

    ಶ್ರೀಮತಿ ವೈಟಮ್ಮನವರಿಗೆ ವಯಸ್ಸಾದಾಗ, ಅವರ ಮಗನಾದ ಡಬ್ಲ್ಯೂ ಸಿ. ವೈಟ್‍ರವರು ತಮ್ಮ ತಾಯಿಗೆ “ಅಮ್ಮಾ, ನೀವು ರಾತ್ರಿ ಸಮಯದಲ್ಲಿ ದರ್ಶನದಲ್ಲಿ ಕನಸಿನಲ್ಲಿ ನಿಮಗೆ ಪ್ರಕಟವಾದ ವಿಷಯಗಳ ಬಗ್ಗೆ ಆಗಾಗ ತಿಳಿಸುತ್ತೀರಿ. ಕನಸುಗಳ ಮೂಲಕ ದೈವೀಕ ಬೆಳಕು ಕೊಡಲ್ಪಟ್ಟವೆಂದು ಹೇಳುವಿರಿ. ಆದರೆ ದೇವರು ನಿಮ್ಮೊಂದಿಗೆ ಮಾತಾಡುತ್ತಿದ್ದಾನೆಂದು ನಿಮಗೆ ಹೇಗೆ ತಿಳಿಯುತ್ತದೆ?” ಎಂದು ಪ್ರಶ್ನಿಸಿದರು.KanCCh .0

    ಅದಕ್ಕುತ್ತರವಾಗಿ ಶ್ರೀಮತಿ ವೈಟಮ್ಮನವರು ತಮ್ಮ ಮಗನಿಗೆ “ರಾತ್ರಿಯಲ್ಲಿ ದರ್ಶನದ ಮೂಲಕ ನನಗೆ ಅದರ ಅರ್ಥವನ್ನು ತಿಳಿಸುವ ಅದೇ ದೇವದೂತನು, ದಿನದಲ್ಲಿಯೂ ಸಹ ನನ್ನ ಬಳಿಯಲ್ಲಿ ನಿಂತುಕೊಂಡು ನನಗೆ ಬೋಧಿಸುತ್ತಾನೆ” ಎಂದು ತಿಳಿಸಿದರು. ಪರಲೋಕದಿಂದ ಬಂದ ಸಂದೇಶವಾಹಕನನ್ನು ಶ್ರೀಮತಿ ವೈಟಮ್ಮನವರು ಬೇರೆ ಸಂದರ್ಭಗಳಲ್ಲಿ “ದೇವದೂತನು” “ನನ್ನ ಮಾರ್ಗದರ್ಶಕ” ನನ್ನ ಬೋಧಕ, ನನ್ನ ಶಿಕ್ಷಕ” ಎಂದು ಸಂಬೋಧಿಸಿದ್ದಾರೆ. KanCCh .0

    ಪ್ರವಾದಿಯ ಮನಸ್ಸಿನಲ್ಲಿ ಯಾವುದೇ ಸಂದೇಹವಿರುವುದಿಲ್ಲ. ರಾತ್ರಿ ಸಮಯದಲ್ಲಿ ಬಂದ ದೇವದರ್ಶನದ ಮೂಲಕ ತಿಳಿಸಲ್ಪಟ್ಟ ಸಂದೇಶಗಳ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ. ಯಾಕೆಂದರೆ ಅದಕ್ಕೆ ಸಂಬಂಧಪಟ್ಟಂತ ಸನ್ನಿವೇಶಗಳಲ್ಲಿ, ಅದು ದೇವರಿಂದ ಬಂದಂತ ಸಂದೇಶವೆಂದು ಪ್ರವಾದಿಗೆ ಸ್ಪಷ್ಟಪಡಿಸಲಾಗುತ್ತದೆ.KanCCh .0

    ಬೇರೆ ಸಂದರ್ಭಗಳಲ್ಲಿ ಶ್ರೀಮತಿ ವೈಟಮ್ಮನವರು ಪ್ರಾರ್ಥಿಸುತ್ತಿರುವಾಗ, ಮಾತಾಡುತ್ತಿರುವಾಗ ಅಥವಾ ಬರೆಯುತ್ತಿರುವಾಗ, ದರ್ಶನಗಳು ಕೊಡಲ್ಪಟ್ಟಿವೆ. ಅವರು ಗಟ್ಟಿಯಾಗಿ ಪ್ರಾರ್ಥಿಸುತ್ತಿರುವಾಗ ಅಥವಾ ಮಾತಾಡುತ್ತಿರುವಾಗ ಕ್ಷಣಕಾಲ ಮೌನತಾಳುವವರೆಗೆ, ಪಕ್ಕದಲ್ಲಿರುವವರಿಗೆ ಶ್ರೀಮತಿ ವೈಟಮ್ಮನವರಿಗೆ ದೇವದರ್ಶನವಾಗುತ್ತಿದೆ ಎಂದು ತಿಳಿಯುವುದಿಲ್ಲ. ಒಂದು ಸಮಯದಲ್ಲಿ ಅವರು ಇದರ ಬಗ್ಗೆ ಹೀಗೆ ಬರೆದಿದ್ದಾರೆ : ‘ನಾನು ಯಥಾರ್ಥವಾಗಿ ಪ್ರಾರ್ಥಿಸುತ್ತಿರುವಾಗ, ನನ್ನಸುತ್ತಲೂ ಏನಾಗುತ್ತಿದೆ ಎಂದು ನನಗೆ ಸಂಪೂರ್ಣವಾಗಿ ಮರೆತು ಹೋಯಿತು. ನಾನಿದ್ದ ಕೊಠಡಿಯು ಬೆಳಕಿನಿಂದ ಪ್ರಕಾಶವಾಯಿತು. ಜನರಲ್ ಕಾನ್‍ಫರೆನ್ಸ್ ಅಧಿವೇಶನದಲ್ಲಿ ಯಾರೋ ಸಂದೇಶ ನೀಡುತ್ತಿರುವುದು ನನಗೆ ಕೇಳಿಸಿತು“. KanCCh .0

    ಶ್ರೀಮತಿ ವೈಟಮ್ಮನವರಿಗೆ ಸುಮಾರು 70 ವರ್ಷಗಳಷ್ಟು ದೀರ್ಘಕಾಲದ ಸೇವೆಯಲ್ಲಿ ಅನೇಕ ಬಾರಿ ದೇವದರ್ಶನವಾಗಿದೆ. ಅವುಗಳಲ್ಲಿ ಅತ್ಯಂತ ದೀರ್ಘವಾದ ದರ್ಶನ ನಾಲ್ಕುಗಂಟೆಗಳ ಅವಧಿಯದ್ದಾಗಿದ್ದರೆ, ಅತ್ಯಂತ ಚಿಕ್ಕ ದರ್ಶನ ಕೆಲವು ನಿಮಿಷಗಳ ಮಾತ್ರವಾಗಿತ್ತು ಸಾಮಾನ್ಯವಾಗಿ ಅವರು ಕಂಡ ದರ್ಶನವು ಅರ್ಧಗಂಟೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯವುಳ್ಳದ್ದಾಗಿತ್ತು. ಆದರೆ ಎಲ್ಲಾ ದರ್ಶನಗಳ ಬಗ್ಗೆ ಯಾವುದೇ ಒಂದು ನಿರ್ದಿಷ್ಟವಾದ ನಿಯಮವಿಲ್ಲ. ಇದರ ವಿಷಯದಲ್ಲಿ ಪೌಲನು “ಪುರಾತನ ಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಬಾಯಿಂದ ಭಾಗಭಾಗವಾಗಿಯೂ, ವಿಧವಿಧವಾಗಿಯೂ ದೇವರು ಮಾತಾಡಿದ್ದಾನೆ” ಎಂದು ಹೇಳುತ್ತಾನೆ (ಇಬ್ರಿಯ 1:1). ದರ್ಶನಗಳ ಮೂಲಕ ಪ್ರವಾದಿಗೆ ದೈವೀಕ ಬೆಳಕು ಕೊಡಲ್ಪಟ್ಟಿತು. ಆದರೆ ದರ್ಶನ ಕಾಣುತ್ತಿರುವಾಗ ಪ್ರವಾದಿಯು ಅದನ್ನು ಬರೆದಿಲ್ಲ. ಅವನ ಕೆಲಸವು ಯಾಂತ್ರಿಕವಾದದ್ದಲ್ಲ. ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ, ದೇವರು ಪ್ರವಾದಿಗೆ ಇಂತದ್ದೇ ಪದಗಳನ್ನು ಮಾತಾಡಬೇಕೆಂದು ತಿಳಿಸಿಲ್ಲ. ಅಥವಾ ದೇವದೂತನು ಪ್ರವಾದಿಯ ಕೈಗಳನ್ನು ಹಿಡಿದುಕೊಂಡು ಇಂತದ್ದೇ ಪದಗಳನ್ನು ಮಾತಾಡಬೇಕೆಂದು ತಿಳಿಸಿಲ್ಲ. ಅಥವಾ ದೇವದೂತನು ಪ್ರವಾದಿಯ ಕೈಗಳನ್ನು ಹಿಡಿದುಕೊಂಡು ಇಂತದ್ದೇ ಪದಗಳನ್ನು ದಾಖಲಿಸಬೇಕೆಂದು ಹೇಳಿಲ್ಲ. ಪ್ರವಾದಿಯು ದೇವದರ್ಶನಗಳಿಂದ ಜ್ಞಾನೋದಯ ಪಡೆದುಕೊಂಡು ತನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದ ಸಂದೇಶಗಳನ್ನು ಜನರಿಗೆ ಬರವಣಿಗೆ ಮೂಲಕ ಅಥವಾ ಮಾತಾಡುವ ಮೂಲಕ ತಿಳಿಸಿದ್ದಾನೆ. KanCCh .0

    ಪ್ರವಾದಿಯ ಮನಸ್ಸಿಗೆ ಹೇಗೆ ಜ್ಞಾನೋದಯವಾಯಿತು? ಅಥವಾ ತಿಳುವಳಿಕೆ ಕೊಡಲ್ಪಟ್ಟಿತು? ಎಂದು ನಾವು ಪ್ರಶ್ನಿಸಬಹುದು. ಜನರಿಗೆ ತಿಳಿಸಬೇಕಾದ ಸಂಗತಿಗಳನ್ನು ಮತ್ತು ಸಲಹೆಗಳನ್ನು ಅವನು ಹೇಗೆ ಪಡೆದುಕೊಂಡನು? ಎಂದು ನೀವು ಕೇಳಬಹುದು. ದರ್ಶನಗಳು ಕೊಡಲ್ಪಡುವುದಕ್ಕೆ ಹೇಗೆ ಒಂದೇ ನಿಯಮವಿಲ್ಲವೋ, ಅದೇರೀತಿ ಪ್ರವಾದಿಯು ದೇವರಾತ್ಮ ಪ್ರೇರಿತವಾದ ಸಂದೇಶವನ್ನು ಹೇಗೆ ಪಡೆದುಕೊಂಡನೆಂಬುದಕ್ಕೆ ಒಂದೇ ನಿಯಮವಿಲ್ಲ. ಆದಾಗ್ಯೂ ಪ್ರತಿಯೊಂದು ಪ್ರಕರಣದಲ್ಲಿಯೂ, ಪ್ರವಾದಿಗೆ ಉಂಟಾಗುವ ಕಣ್ಣಿಗೆ ಕಟ್ಟುವಂತ ಅನುಭವವು ಅವನ ಮನಸ್ಸಿನಲ್ಲಿ ಅಳಿಸಲಾಗದಂತ ಪ್ರಭಾವ ಬೀರುತ್ತದೆ. ನಾವು ಕೇಳಿದ್ದಕ್ಕಿಂತಲೂ ಹೆಚ್ಚಾಗಿ, ನೋಡಿದ ಹಾಗೂ ಅನುಭವಕ್ಕೆ ಬಂದ ದೃಶ್ಯಗಳು ನಮ್ಮ ಮನಸ್ಸಿನಲ್ಲಿ ಆಳವಾದ ಪರಿಣಾಮಬೀರುತ್ತವೆ. ಅದೇರೀತಿಯಲ್ಲಿ ದೇವದರ್ಶನದಲ್ಲಿ ಕಣ್ಣಾರೆ ನೋಡಿದ ಘಟನೆಗಳು ಪ್ರವಾದಿಯ ಮನಸ್ಸಿನಲ್ಲಿ ಅಚ್ಚಳಿಯದ ಪರಿಣಾಮ ಉಂಟುಮಾಡುತ್ತವೆ. ಈ ವಿಷಯವಾಗಿ ಶ್ರೀಮತಿ ವೈಟಮ್ಮನವರು “ಭೂಲೋಕದಲ್ಲಿ ನಡೆಯುತ್ತಿರುವ ದೃಶ್ಯಗಳ ಬಗ್ಗೆ ನನ್ನ ಗಮನ ಹೆಚ್ಚಾಗಿ ಕೇಂದ್ರೀಕರಿಸಲ್ಪಟ್ಟಿತು. ಆದರೆ ಕೆಲವು ಸಮಯಗಳಲ್ಲಿ ಮುಂದೆ ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳು ನನಗೆ ಕಂಡುಬರುತ್ತಿದ್ದವು. ಅನಂತರ ತಿರುಗಿ ಹಿಂದೆ ನಡೆದ ಸಂಗತಿಗಳು ನನಗೆ ತೋರಿಸಲ್ಪಟ್ಟವು” ಎಂದು ತಿಳಿಸಿದ್ದಾರೆ. KanCCh .0

    ಶ್ರೀಮತಿ ವೈಟಮ್ಮನವರ ಈ ಹೇಳಿಕೆಯಿಂದ ಈ ಸಂಗತಿಗಳು, ದೃಶ್ಯಗಳು ಹಾಗೂ ಘಟನೆಗಳನ್ನು ಅವರು ಕಣ್ಣಾರೆನೋಡಿದರೆಂದು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ದರ್ಶನದಲ್ಲಿ ಅವರ ಮುಂದೆ ಇವೆಲ್ಲವೂ ಪುನಃ ಕಂಡು ಬಂದದ್ದರಿಂದ, ಅವರ ಮನಸ್ಸಿನಲ್ಲಿ ಇವು ಅಚ್ಚಳಿಯದೆ ಉಳಿಯಿತು. ಬೇರೆ ಕೆಲವು ಸಂದರ್ಭಗಳಲ್ಲಿ ದರ್ಶನದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಶ್ರೀಮತಿ ವೈಟಮ್ಮನವರು ತಾವೇಸ್ವತಃ ಅದರಲ್ಲಿ ಭಾಗಿಯಾಗಿರುವಂತೆಯೂ, ನೋಡಿದಂತೆಯೂ, ವಿಧೇಯರಾದಂತೆಯೂ ಹಾಗೂ ಮುಟ್ಟಿ ತಿಳಿದುಕೊಂಡಂತೆಯೂ ಅನಿಸಿಕೆ ಉಂಟಾಗುತ್ತಿತ್ತು. ಆದರೆ ನಿಜವಾಗಿಯೂ ಇವುಗಳನ್ನು ಅವರು ಅನುಭವಿಸಿರಲಿಲ್ಲ. ಆದಾಗ್ಯೂ ದೇವದರ್ಶನದಲ್ಲಿ ನೋಡಿದ ದೃಶ್ಯಗಳು ಎಂದೆಂದಿಗೂ ಮರೆಯದಂತ ರೀತಿಯಲ್ಲಿ ಅವರ ಮನಸ್ಸಿನಲ್ಲಿ ಪರಿಣಾಮ ಉಂಟುಮಾಡುತ್ತಿದ್ದವು. ಅವರು ಮೊಟ್ಟಮೊದಲು ನೋಡಿದ ದರ್ಶನವು ಇಂತದ್ದಾಗಿತ್ತು. KanCCh .0

    ಬೇರೆ ಕೆಲವು ಸಂದರ್ಭಗಳಲ್ಲಿ ಶ್ರೀಮತಿ ವೈಟಮ್ಮನವರು ದರ್ಶನದಲ್ಲಿದ್ದಾಗ, ದೂರದ ಸ್ಥಳದಲ್ಲಿ ನಡೆಯುತ್ತಿರುವ ಯಾವುದೋ ಕೂಟದಲ್ಲಿ, ಅಥವಾ ಮನೆಗಳಲ್ಲಿ ಇಲ್ಲವೆ ಸಂಸ್ಥೆಗಳಲ್ಲಿ ಇದ್ದಂತೆ ಅವರಿಗೆ ಅನಿಸುತ್ತಿತ್ತು. ಇದು ಅವರ ಮನಸ್ಸಿನಲ್ಲಿ ಎಷ್ಟೊಂದು ಅಚ್ಚಳಿಯದೆ ಉಳಿದಿರುತಿತ್ತೆಂದರೆ, ಬೇರೆಬೇರೆ ವ್ಯಕ್ತಿಗಳು ಏನು ಮಾತಾಡಿದರೆಂಬುದನ್ನು ವಿವರವಾಗಿ ಶ್ರೀಮತಿ ವೈಟಮ್ಮನವರು ತಿಳಿಸುತ್ತಿದ್ದರು. ಇಂತಹ ಒಂದು ದರ್ಶನದಲ್ಲಿ ಅವರು ನಮ್ಮ ಸಂಸ್ಥೆಯು ನಡೆಸುತ್ತಿದ್ದ ಮೆಡಿಕಲ್ ಕಾಲೇಜಿಗೆ ಒಯ್ಯಲ್ಪಟ್ಟು ಅಲ್ಲಿರುವ ಕೊಠಡಿಗಳಿಗೆ ಭೇಟಿ ನೀಡಿದರು. ಅಲ್ಲಿ ಅವರು ನಡೆಯುತ್ತಿದ್ದ ಎಲ್ಲವನ್ನೂ ನೋಡಿದರು. ಇದರ ಬಗ್ಗೆ ಅವರು ತಮಗಾದ ಅನುಭವವನ್ನು “ಅಲ್ಲಿ ನಡೆಯುತ್ತಿದ್ದ ಕೆಲಸಕ್ಕೆ ಬಾರದ ಹರಟೆಯ ಮಾತುಗಳು, ಅರ್ಥವಿಲ್ಲದ ನಗು, ಮೂರ್ಖತನದ ಅಪಹಾಸ್ಯ ನನ್ನ ಕಿವಿಗೆ ಬಿತ್ತು. ವೈದ್ಯಕೀಯ ಕಾಲೇಜಿನ ಸಿಬ್ಬಂದಿಯವರಲ್ಲಿದ್ದ ಹೊಟ್ಟೆಕಿಚ್ಚು, ದ್ವೇಷದ ಮಾತುಗಳು ನನಗೆ ಆಶ್ಚರ್ಯ ತಂದವು. ಇವುಗಳಿಂದ ದೇವದೂತರಿಗೂ ನಾಚಿಕೆಯಾಯಿತು” ಎಂದು ತಿಳಿಸುತ್ತಾರೆ. KanCCh .0

    ಅನಂತರ ಶ್ರೀಮತಿ ವೈಟಮ್ಮನವರಿಗೆ ಅದೇ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಂತ ಹಿತಕರವಾದ ಪರಿಸ್ಥಿತಿಯ ಬಗ್ಗೆ ದೇವರು ದರ್ಶನದಲ್ಲಿ ಪ್ರಕಟಗೊಳಿಸಿದನು. ಅಲ್ಲಿನ ಕೆಲವು ಕೊಠಡಿಗಳಲ್ಲಿ ಅನೇಕರು ಪ್ರಾರ್ಥಿಸುತ್ತಿದ್ದರು. ಆ ಸ್ವರವು ಎಷ್ಟೊಂದು ಮಧುರವಾಗಿತ್ತು! ಈ ವೈದ್ಯಕೀಯ ಕಾಲೇಜಿನಲ್ಲಿ ತಾವು ದರ್ಶನದಲ್ಲಿ ಕಂಡ ದೃಶ್ಯಗಳ ಆಧಾರದಲ್ಲಿ ಶ್ರೀಮತಿ ವೈಟಮ್ಮನವರು ಸಲಹೆ ನೀಡುವಂತ ಒಂದು ಸಂದೇಶವನ್ನು ಕೊಟ್ಟಿದ್ದಾರೆ. KanCCh .0

    ಅನೇಕ ಸಂದರ್ಭಗಳಲ್ಲಿ ಶ್ರೀಮತಿವೈಟಮ್ಮನವರಿಗೆ ವಿವಿಧ ರೀತಿಯ ಸಂಕೇತಗಳ ಮೂಲಕ ಪ್ರವಾದನಾ ಬೆಳಕು ಕೊಡಲ್ಪಟ್ಟಿತು. ಅಂತಹ ಒಂದು ದೈವೀಕ ದರ್ಶನವನ್ನು ಈ ಕೆಳಗೆ ನೀಡಲಾಗಿದೆ. ದೇವರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಒಬ್ಬ ಸೇವಕರು ಕಷ್ಟದ ಪರಿಸ್ಥಿತಿಯಲ್ಲಿದ್ದಾಗ, ಅವರಿಗೆ ಈ ಕೆಳಗೆ ತಿಳಿಸಿದ ಘಟನೆಯನ್ನು ವೈಯಕ್ತಿಕ ಸಂದೇಶದ ರೀತಿಯಲ್ಲಿ ಶ್ರೀಮತಿ ವೈಟಮ್ಮನವರು ತಿಳಿಸಿದ್ದರು. ಅದು ಈ ರೀತಿಯಿದೆ : KanCCh .0

    “ಆ ದರ್ಶನದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಆ ದೇವರ ಸೇವಕರು ಒಂದು ಕುದುರೆಯ ಮೇಲೆ ಜಯಧ್ವಜವನ್ನು ಹಿಡಿದುಕೊಂಡು ಕುಳಿತ ಒಬ್ಬ ಸೇನಾಧಿಪತಿಯಂತೆ ಕಂಡರು. ಒಬ್ಬ ವ್ಯಕ್ತಿ ಬಂದು ಇವರ ಕೈಯಲ್ಲಿದ್ದ “ದೇವರ ಹತ್ತು ಆಜ್ಞೆಗಳು ಹಾಗೂ ಯೇಸುವಿನ ಮೇಲಣ ನಂಬಿಕೆ” ಎಂದು ಬರೆದಿದ್ದ ಆ ಜಯಧ್ವಜವನ್ನು ತೆಗೆದುಕೊಂಡನು. ಅದು ನೆಲಕ್ಕೆ ಹಾಕಿ ತುಳಿಯಲ್ಪಟ್ಟಿತು. ಕುದುರೆಯ ಮೇಲೆ ಕುಳಿತಿದ್ದ ದೇವರ ಸೇವಕರನ್ನು ಅನೇಕರು ಸುತ್ತಿಕೊಂಡಿದ್ದರು. ಈ ಜನರು ಅವರನ್ನು ಲೌಕಿಕ ವ್ಯವಹಾರದಲ್ಲಿ ಸಂಬಂಧ ಹೊಂದುವಂತೆ ಮಾಡಿದ್ದರು“. KanCCh .0

    ಕೆಲವು ಸಂದರ್ಭಗಳಲ್ಲಿ ವಿವಿಧವಾದ ಹಾಗೂ ಒಂದಕ್ಕೊಂದು ವ್ಯತಿರಿಕ್ತವಾದ ದೃಶ್ಯಗಳು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಲ್ಪಟ್ಟಿತು. ಒಂದು ದೃಶ್ಯದಲ್ಲಿ ನಿರ್ದಿಷ್ಟವಾದ ಯೋಜನೆಗಳು ಅಥವಾ ವಿವೇಕಯುತವಾದ ನಿಯಮಗಳನ್ನು ಅನುಸರಿಸಿದರೆ ಏನಾಗುತ್ತದೆಂದು ತಿಳಿಸಲಾಯಿತು. ಮತ್ತೊಂದು ದೃಶ್ಯದಲ್ಲಿ ಇತರ ಯೋಜನೆಗಳು ಅಥವಾ ವಿವೇಕಯುತವಾದ ನಿಯಮಗಳನ್ನು ಶ್ರಮವಹಿಸಿ ಮಾಡಿ ಮುಗಿಸಿದಾಗ ಉಂಟಾಗುವ ಫಲಿತಾಂಶವೇನೆಂದು ತೋರಿಸಲಾಯಿತು. ಇಂತಹ ಒಂದು ದೇವದರ್ಶನದ ಅತ್ಯುತ್ತಮ ಉದಾಹರಣೆಯನ್ನು ಅಮೇರಿಕಾ ದೇಶದ ಪಶ್ಚಿಮ ಭಾಗದಲ್ಲಿರುವ ಕ್ಯಾಲಿಫೋರ್ನಿಯಾ ರಾಜ್ಯದ ಲೋಮಾಲಿಂಡಾ ಎಂಬಲ್ಲಿರುವ ಆರೋಗ್ಯಕರ ಆಹಾರ ತಯಾರಿಕಾ ಘಟಕಕ್ಕೆ ಸಂಬಂಧಿಸಿದಂತೆ ನೋಡಬಹುದು. ಅಲ್ಲಿನ ಮ್ಯಾನೇಜರ್ ಹಾಗೂ ಇತರ ಅಧಿಕಾರಿಗಳು ಆಸ್ಪತ್ರೆಗೆ ಬಹಳ ಸಮೀಪದಲ್ಲಿ ಒಂದು ದೊಡ್ಡ ಕಟ್ಟಡ ಕಟ್ಟಿಸಲು ಯೋಜನೆ ಮಾಡುತ್ತಿದ್ದರು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಅವರು ಯೋಚಿಸುತ್ತಿದ್ದಾಗ, ನೂರಾರು ಮೈಲಿ ದೂರದಲ್ಲಿ ತಮ್ಮ ಮನೆಯಲ್ಲಿದ್ದ ಶ್ರೀಮತಿ ವೈಟಮ್ಮನವರಿಗೆ ಒಂದು ರಾತ್ರಿಯಲ್ಲಿ ಎರಡು ದರ್ಶನಗಳಾದವು. ಮೊದಲನೆ ದರ್ಶನದಲ್ಲಿ ಅವರು ಕಂಡದ್ದನ್ನು ಹೇಗೆ ತಿಳಿಸುತ್ತಾರೆ :KanCCh .0

    “ದೇವದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ಅನೇಕ ವಿಧವಾದ ಆರೋಗ್ಯಕರ ಆಹಾರ ಪದಾರ್ಥ ತಯಾರಿಸುತ್ತಿರುವ ಒಂದು ದೊಡ್ಡ ಕಟ್ಟಡ ನೋಡಿದರು. ಅದರ ಪಕ್ಕದಲ್ಲಿಯೇ ಕೆಲವಾರು ಸಣ್ಣ ಕಟ್ಟಡಗಳಿದ್ದವು. ಅದರ ಬಳಿ ಅವರು ನಿಂತುಕೊಂಡಿದ್ದಾಗ, ಒಳಗಿನಿಂದ ಕೆಲಸದ ವಿಷಯದಲ್ಲಿ ಕೆಲಸಗಾರರ ನಡುವೆ ಬಿರುಸಿನ ವಾದವಿವಾದ ನಡೆಯುತ್ತಿರುವುದನ್ನು ಕೇಳಿದರು. ಕೆಲಸಗಾರರ ನಡುವೆ ಉತ್ತಮ ಸಂಬಂಧವಿರಲಿಲ್ಲವಾದ್ದರಿಂದ, ಅಲ್ಲಿ ಗಲಿಬಿಲಿ ಉಂಟಾಗಿತ್ತು“.KanCCh .0

    ಅನಂತರ ಶ್ರೀಮತಿ ವೈಟಮ್ಮನವರು ಚಿಂತೆಗೊಳಗಾದ ಆರೋಗ್ಯಕರ ಆಹಾರ ಪದಾರ್ಥ ತಯಾರಿಕಾಘಟಕದ ಮ್ಯಾನೇಜರ್‍ರವರು ಕೆಲಸಗಾರರ ನಡುವೆ ಒಳ್ಳೆಯ ಸಂಬಂಧ ಉಂಟುಮಾಡಲು ಬಹಳವಾಗಿ ಪ್ರಯತ್ನಿಸುತ್ತಿರುವುದನ್ನು ಕಂಡರು. ಇದನ್ನು ಕೇಳಿದ ಆಸ್ಪತ್ರೆಯಲ್ಲಿದ್ದ ರೋಗಿಗಳು ಇಂತಹ ಸುಂದರವಾದ ಸ್ಥಳದಲ್ಲಿ ಆಹಾರ ತಯಾರಿಸುವ ಫ್ಯಾಕ್ಟರಿ ಆರಂಭಿಸುವುದರ ಬಗ್ಗೆ ವಿಷಾದದಿಂದ ಮಾತಾಡುತ್ತಿದ್ದರು. ಆಗ ಒಬ್ಬ ವ್ಯಕ್ತಿಯು ಶ್ರೀಮತಿ ವೈಟಮ್ಮನವರಿಗೆ ಕಾಣಿಸಿಕೊಂಡು ಕೆಲವು ನಿರ್ದಿಷ್ಟವಾದ ಯೋಜನೆಗಳನ್ನು ಜಾರಿಗೊಳಿಸಿದಲ್ಲಿ ಉಂಟಾಗುವ ಪರಿಣಾಮಗಳನ್ನು ನಿನಗೆ ಪ್ರತ್ಯಕ್ಷ ದೃಷ್ಟಾಂತವಾಗಿ ತೋರಿಸಲಾಗಿದೆ ಎಂದು ತಿಳಿಸಿದನು. KanCCh .0

    ಅನಂತರ ಶ್ರೀಮತಿ ವೈಟಮ್ಮನವರು ನೋಡುತ್ತಿದ್ದ ಈ ದೇವದರ್ಶನದ ದೃಶ್ಯ ಬದಲಾಯಿತು. ಆಸ್ಪತ್ರೆಯಿಂದ ದೂರದಲ್ಲಿ ಕಟ್ಟಿದ್ದ ಆಹಾರ ತಯಾರಿಕಾ ಘಟಕವನ್ನು ಅವರು ನೋಡಿದರು ಇದರಲ್ಲಿ ಕೆಲಸಕಾರ್ಯಗಳು ದೇವರ ಯೋಜನೆಗೆ ಅನುಸಾರವಾಗಿ ನಡೆಯುತ್ತಿದ್ದವು. ಈ ದರ್ಶನ ಮುಗಿದ ಕೆಲವೇ ಗಂಟೆಗಳಲ್ಲಿ ಶ್ರೀಮತಿ ವೈಟಮ್ಮನವರು ಇದರ ಬಗ್ಗೆ ಮ್ಯಾನೇಜರ್‍ರವರಿಗೆ ಪತ್ರದಲ್ಲಿ ಬರೆದು ತಿಳಿಸಿದರು. ಇದರಿಂದ ಆಹಾರ ಪದಾರ್ಥ ತಯಾರಿಕಾ ಫ್ಯಾಕ್ಟರಿಯನ್ನು ಅವರ ಸಲಹೆಯಂತೆ ಆಸ್ಪತ್ರೆಯಿಂದ ದೂರದಲ್ಲಿ ಕಟ್ಟಲಾಯಿತು. ಒಂದು ವೇಳೆ ಮ್ಯಾನೇಜರ್‍ರವರ ಮೊದಲಿನ ಯೋಜನೆಯಂತೆ, ಆಸ್ಪತ್ರೆಯ ಪಕ್ಕದಲ್ಲಿ ಫ್ಯಾಕ್ಟರಿ ಆರಂಭಿಸಿದ್ದಲ್ಲಿ, ಅನಂತರದ ವರ್ಷಗಳಲ್ಲಿ ಅದೊಂದು ದೊಡ್ಡ ವಾಣಿಜ್ಯ ವ್ಯವಹಾರದ ಕಟ್ಟಡವಾಗಿ, ಆಸ್ಪತ್ರೆಯ ಸೇವೆಗೆ ಬಹಳ ಅಡ್ಡಿಯಾಗುತ್ತಿತ್ತು. ಇದರ ಮೂಲಕ ನಾವು ದೇವರು ತನ್ನ ಪ್ರವಾದಿನಿಯವರಾದ ಶ್ರೀಮತಿ ವೈಟಮ್ಮನವರಿಗೆ ರಾತ್ರಿಯಲ್ಲಾಗಲಿ ಅಥವಾ ದಿನದಲ್ಲಾಗಲಿ ಹೇಗೆ ವಿವಿಧ ರೀತಿಯಲ್ಲಿ ದರ್ಶನಗಳ ಮೂಲಕ ಮಾಹಿತಿಗಳನ್ನು ಹಾಗೂ ಸೂಕ್ತವಾದ ಸಲಹೆಗಳನ್ನು ನೀಡಿದನೆಂದು ತಿಳಿದುಕೊಳ್ಳಬಹುದು. KanCCh .0

    ದೇವರ ಪ್ರವಾದಿಯು ಜನರಿಗೆ ತಿಳುವಳಿಕೆ ನೀಡುವ ಸಲಹೆಗಳನ್ನು ತನಗೆ ತಿಳಿಸಲ್ಪಟ್ಟ ಬೆಳಕಿನಂತೆ ಬರೆದಿದ್ದಾರೆ ಅಥವಾ ಬೋಧಿಸಿದ್ದಾರೆ. ಇದನ್ನು ಮಾಡುವಾಗ ಶ್ರೀಮತಿ ವೈಟಮ್ಮನವರು ದೇವರ ಪರಿಶುದ್ಧಾತ್ಮನಿಂದ ಸಹಾಯ ಹೊಂದಿದ್ದಾರೆ. ಆದರೆ ಈ ಸಂದೇಶ ನೀಡುವಾಗ ತಮ್ಮದೇ ಆದ ಮಾತುಗಳನ್ನು ಉಪಯೋಗಿಸಿದ್ದಾರೆ. ಆದರೆ ದೇವದೂತನು ತಿಳಿಸಿದ ಸಂಗತಿಗಳನ್ನು ಅವನು ಹೇಳಿದಂತೆಯೇ ಬರೆದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪವಿತ್ರಾತ್ಮನ ಮಾರ್ಗದರ್ಶನದಂತೆ ಶ್ರೀಮತಿ ವೈಟಮ್ಮನವರು ಸತ್ಯವೇದವನ್ನು ಬರೆದ ಅನೇಕ ಲೇಖಕರಂತೆ, ಇತರ ಬರಹಗಾರರ ಭಾಷೆಯನ್ನು ಉಪಯೋಗಿಸಿದ್ದಾರೆ. ಅದರಲ್ಲಿ ಅವರು ಈ ಬರಹಗಾರರ ಮಾತುಗಳ ಸ್ವರೂಪ ಹಾಗೂ ಅದನ್ನು ವ್ಯಕ್ತಪಡಿಸಿದ ವಿಧಾನವನ್ನು ವಿಶೇಷವಾಗಿ ಕೃತಜ್ಞತೆಯ ಮೂಲಕ ಮೆಚ್ಚುಗೆ ತೋರಿಸಿದ್ದಾರೆ. KanCCh .0